ಮಡಿಕೇರಿ, ಸೆ. ೫: ಮಡಿಕೇರಿ ಹೃದಯ ಭಾಗದಲ್ಲಿರುವ ಸುಮಾರು ೭೦ಕ್ಕೂ ಅಧಿಕ ವರ್ಷಗಳ ಹಿನ್ನಲೆವುಳ್ಳ ಐತಿಹಾಸಿಕ ಮತ್ತು ಕೊಡಗು ಪ್ರತ್ಯೇಕ ರಾಜ್ಯವಾಗಿದ್ದು ಕೊಡಗು ಸರಕಾರದ ಅವಧಿಯಲ್ಲಿ ನಿರ್ಮಿತ ‘ಟೌನ್ ಹಾಲ್’ ಅರ್ಥಾತ್ ಈಗಿನ ‘ಕಾವೇರಿ ಕಲಾಕ್ಷೇತ್ರ’ ಇನ್ನೇನು ಕೆಲವೇ ದಿನಗಳಲ್ಲಿ ಕುಸಿದು ನೆಲಸಮ ಗೊಳ್ಳಲು ದಿನಗಣನೆ ಎಣಿಸುತ್ತಿದ್ದರೂ ಜನಪ್ರತಿನಿಧಿಗಳ ಮತ್ತು ನಗರಸಭಾ ಅಧಿಕಾರಿಗಳ ಚಿತ್ತ ಇತ್ತ ಹರಿಯದಿರುವುದು ದುರದೃಷ್ಟಕರ!
ಈಗಾಗಲೇ ಕಟ್ಟಡದ ಮಾಡು ಶಿಥಿಲಗೊಂಡು, ಮಳೆಯ ಆರ್ಭಟಕ್ಕೆ ಗೋಡೆಗಳ ಮತ್ತು ಮೇಲೆ ಹೊದಿಸಿದ ಶೀಟುಗಳ ಮೂಲಕ ಮಳೆ ನೀರು ಸಭಾಂಗಣದೊಳಗೆ ಒಸರುತ್ತಿದೆ. ನೆಲಹಾಸಿನ ಮೇಲೆ ಪಾಚಿ ಹಿಡಿದು ದರಿಂದ ಇದೀಗ ಸಭಾಂಗಣದೊಳಗೆ ನಡೆಯುತ್ತಿರುವ ಕೋವಿಡ್-೧೯ ಪ್ರಯುಕ್ತ ಚುಚ್ಚುಮದ್ದು ತೆಗೆದು ಕೊಳ್ಳಲು ಬಂದಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದಿರುವುದನ್ನು ಎಲ್ಲರೂ ನೋಡಿದ್ದಾರೆ. ನೆಲದಲ್ಲಿ ಕೊಳಚೆ ನೀರು ಸಂಗ್ರಹಗೊAಡು ನಡೆದಾಡುವವರ ಮೇಲೆ ಸಿಂಚನಗೊಳ್ಳುತ್ತಿದೆ.
೧೮.೧.೧೯೫೩ ರಲ್ಲಿ ಆಗಿನ ಪುರಸಭೆಯ ಆಡಳಿತಾವಧಿಯಲ್ಲಿ ‘ಟೌನ್ಹಾಲ್’ ಕಟ್ಟಡವನ್ನು ನಿರ್ಮಿಸಲುದ್ದೇಶಿಸಿ ಆಗಿನ ಕೊಡಗು ಸರಕಾರವಿದ್ದ ಸಂದರ್ಭ ಕೊಡಗಿನ ಚೀಫ್ ಕಮೀಷನರ್ ಆಗಿದ್ದ ಲೆ.ಕ. ಡಿ.ಎಸ್. ಬೇಡಿ ಐಪಿಎಸ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.
ಕೇವಲ ಒಂದು ವರ್ಷದಲ್ಲಿ ಆಗಿನ ಜನಸಂಖ್ಯೆಗನುಗುಣವಾಗಿ ಸುಸಜ್ಜಿತವಾದ, ಆಕರ್ಷಕವುಳ್ಳ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸಿ ಆಗಲೂ ಕೊಡಗು ಸರಕಾರವಿದ್ದ ಸಂದರ್ಭ ೧.೧.೧೯೫೪ರಲ್ಲಿ ಮುಖ್ಯಮಂತ್ರಿಯಾಗಿದ್ದ ಚೆಪ್ಪುಡಿರ ಎಂ. ಪೂಣಚ್ಚ ಮತ್ತು ಕಾನೂನು ಸುವ್ಯವಸ್ಥೆ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಕೆ. ಮಲ್ಲಪ್ಪ ಅವರುಗಳ ಸಮ್ಮುಖದಲ್ಲಿ ‘ಟೌನ್ಹಾಲ್’ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಯಿತು.
ಅಂದಿನಿAದ ಆರಂಭಗೊAಡ ಈ ಟೌನ್ಹಾಲ್ ಕಟ್ಟಡದಲ್ಲಿ ಸಹಸ್ರಾರು ಕಾರ್ಯಕ್ರಮಗಳು ನಡೆದಿವೆ. ಸರಕಾರಿ ಮತ್ತು ಖಾಸಗಿ ಅಲ್ಲದೆ, ವಿವಿಧ ರಾಜಕೀಯ ಪಕ್ಷಗಳ ಸಭೆ - ಸಮಾರಂಭಗಳು ನಡೆದಿವೆ. ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಮತ್ತು ರಾಜಕಾರಣಿಗಳು ಸೇರಿದಂತೆ ವಿವಿಧ ಪ್ರಮುಖರು ಭಾಷಣ ಮಾಡಿದ ಖ್ಯಾತಿಯನ್ನು ಗಳಿಸಿದೆ. ಇಲ್ಲಿ ನಡೆದ ಕಾರ್ಯಕ್ರಮ ಗಳಿಂದ ಜಿಲ್ಲೆಯ ಮತ್ತು ಜನರ ಬೇಕು ಬೇಡಿಕೆಗಳು ಈಡೇರಿರಬಹುದು ಅಥವಾ ಈಡೇರದೆ ಇರಲೂಬಹುದು.
ಮಡಿಕೇರಿ ಸುಮಾರು ೩೦೦ ವಸಂತಗಳನ್ನು ಪೂರೈಸುತ್ತಿದ್ದ ೧೯೯೦ರಲ್ಲಿ ಆಗಿನ ಹೆಚ್. ಭಾಸ್ಕರ್ ಜಿಲ್ಲಾಧಿಕಾರಿ ಹಾಗೂ ಪುರಸಭೆಯ ಆಡಳಿತಾಧಿಕಾರಿಯೂ ಆಗಿದ್ದ ವೇಳೆ ಟೌನ್ಹಾಲ್ ಕಟ್ಟಡವನ್ನು ಆಕರ್ಷಕವಾಗಿ ನವೀಕರಿಸಿದರು.
ಅದೇ ಸಂದರ್ಭ ಮಡಿಕೇರಿ ೩೦೦ ವಸಂತಗಳನ್ನು ಪೂರೈಸಿದ ಸವಿನೆನಪಿಗಾಗಿ ಟೌನ್ಹಾಲ್ ಕಟ್ಟಡಕ್ಕೆ ‘ಕಾವೇರಿ ಕಲಾಕ್ಷೇತ್ರ’ ಎಂದು ನಾಮಕರಣ ಮಾಡಿ ಆಗಿನ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕಿ ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಉಪ ಸಚಿವೆಯಾಗಿದ್ದ ಸುಮಾವಸಂತ ೨೮.೫.೧೯೯೦ ರಂದು ಲೋಕಾರ್ಪಣೆ ಮಾಡಿದರು.
ಅರ್ಥಪೂರ್ಣ ಕಾರ್ಯಕ್ರಮ ದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ದಂಬೆಕೋಡಿ ಎ. ಚಿಣ್ಣಪ್ಪ ಪುರಸÀಭಾ ಮಾಜಿ ಸದಸ್ಯರುಗಳು, ಜನಪ್ರತಿನಿಧಿಗಳು ಅಲ್ಲದೆ ಮತ್ತಿತರರು ಪಾಲ್ಗೊಂಡಿದ್ದರು.
ಜಿಲ್ಲೆಯ ವಿವಿಧ ಇಲಾಖೆಗಳಿಗೆ ಸಂಬAಧಿಸಿದ ಸರಕಾರಿ ಕಾರ್ಯಕ್ರಮ ಗಳನ್ನು ಮತ್ತು ಖಾಸಗಿ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ನಡೆಯುವ ಕಾರ್ಯಕ್ರಮಗಳಿಗೆ ಬಾಡಿಗೆ ವಿಧಿಸಿ ವಸೂಲಿ ಮಾಡುವುದು ಮಾತ್ರ ನೆನಪಾಗುತ್ತದೆ. ಆದರೆ, ಕಲಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಗರಸಭಾ ಅಧಿಕಾರಿಗಳಿಗೆ ಮತ್ತು ಶಾಸಕದ್ವಯರು ಸೇರಿದಂತೆ ನಗರಸಭೆಯಲ್ಲಿ ಈ ಹಿಂದೆ ಆಡಳಿತ ನಡೆಸಿದ ಯಾವ ಜನಪ್ರತಿನಿಧಿಗಳಿಗೆ ನೆನಪಾಗದಿರುವುದು ಖೇದಕರ.
ಕಾವೇರಿ ಕಲಾಕ್ಷೇತ್ರದಲ್ಲಿ ಯಾವುದೇ ಕಾರ್ಯಕ್ರಮಗಳು ಆಯೋಜನೆಯಾದಾಗ ಯಾರಿಗೂ ದೂರ ಅನಿಸುತ್ತಿರಲಿಲ್ಲ. ಎಲ್ಲಾ ಕಾರ್ಯಕ್ರಮಗಳಲ್ಲಿ ಕುಟುಂಬ ಸಹಿತ ಭಾಗಿಯಾಗುತ್ತಿದ್ದರು. ಪ್ರಸ್ತುತ ನಗರದ ಎರಡು ಕಿ.ಮೀ. ದೂರದಲ್ಲಿರುವ ಮೈಸೂರು ರಸ್ತೆಯ ಹಳೇ ಸೌದೆ ಡಿಪ್ಪೊ ಬಳಿ ಕರ್ನಾಟಕ ಸುವರ್ಣ ಸಮುಚ್ಛಯದ ಸಭಾಂಗಣವನ್ನು ನಿರ್ಮಿಸಲಾಗುತ್ತಿದೆ. ಅಲ್ಲಿ ಕಾರ್ಯಕ್ರಮಗಳು ನಡೆದರೆ ಎಷ್ಟು ಮಂದಿ ತೆರಳುವರೆಂದು ಕಾದು ನೋಡಬೇಕಾಗಿದೆ.
ಮಕ್ಕಳ ಕಾರ್ಯಕ್ರಮ ಇದ್ದಲ್ಲಿ ಅವರ ಪೋಷಕರು ಮಾತ್ರ ತೆರಳಬಹುದು. ಉಳಿದಂತೆ ಕಾರ್ಯಕ್ರಮವನ್ನು ವೀಕ್ಷಿಸಲು ತೆರಳು ವವರ ಸಂಖ್ಯೆ ವಿರಳವಾಗಬಹುದು.
ಇಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗುತ್ತಿದೆ. ಆ ಕಟ್ಟಡ ನಿರ್ಮಾಣ ಕಾಮಗಾರಿ ಎಂದು ಪೂರ್ಣಗೊಳ್ಳುತ್ತದೋ? ತಿಳಿಯದು. ಈ ಬಗ್ಗೆ ಅಭಿಯಂತರರು ಸ್ಪಷ್ಟ ಪಡಿಸುವುದು ಅನಿವಾರ್ಯವಾಗಿದೆ.
ಈ ಎಲ್ಲ ಹಿನ್ನೆಲೆ ಪ್ರಸ್ತುತ ಕಾವೇರಿ ಕಲಾಕ್ಷೇತ್ರವನ್ನು ಕೆಡವಿ ಈಗಿನ ಜನಸಂಖ್ಯೆಗನುಗುಣವಾಗಿ ವಿಸ್ತರಿಸಿ, ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಮತ್ತು ಯಾವುದೇ ಕೊರತೆ, ಸಮಸ್ಯೆಯಿಲ್ಲದಂತೆ ನಿರ್ಮಿಸುವುದು ಸೂಕ್ತ.
ಹಿಂದೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷೆಯಾಗಿದ್ದ ಮತ್ತು ಟಿ.ಎಂ. ಅಯ್ಯಪ್ಪ ಉಪಾಧ್ಯಕ್ಷರಾಗಿದ್ದ ಸಂದರ್ಭ ಕಾವೇರಿ ಕಲಾ ಕ್ಷೇತ್ರ ಕಟ್ಟಡವನ್ನು ಕೆಡವಿ ಈ ಕಟ್ಟಡದ ಹಿಂಭಾಗದ ರಸ್ತೆಯ ಸಮತಟ್ಟಿಗೆ ಸರಿಯಾಗಿ ಮಣ್ಣು ತೆರವುಗೊಳಿಸಿ ಅಲ್ಲಿ ನಗರಸಭೆಗೆ ಸೇರಿದ, ಅಲ್ಲದೆ, ಇತರರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಈಗಿರುವ ಸಭಾಂಗಣವನ್ನು ವಿಸ್ತರಿಸಿ ವ್ಯವಸ್ಥಿತ ರಂಗಮAದಿರ, ಅದರ ಮೇಲಿನ ಭಾಗದಲ್ಲಿ ನಗರಸಭೆಯ ಎಲ್ಲ ಕಚೇರಿಗಳಿರುವಂತೆ ಬೃಹತ್ ಕಟ್ಟಡವನ್ನು ನಿರ್ಮಿಸಲು ಯೋಜನೆ ರೂಪಿಸಿ ನಕ್ಷೆ ಸಿದ್ಧಪಡಿಸಿ ಆಗಿನ ಆಡಳಿತ ಮಂಡಳಿಯ ಸಭೆಗಳಲ್ಲಿ ಯೋಜನೆ ಕುರಿತು ಚರ್ಚೆ ನಡೆಸಲಾಯಿತಾದರೂ ಬಿಜೆಪಿ ಸದಸ್ಯರ ಒಕ್ಕೊರಲಿನ ವಿರೋಧದಿಂದ ಇಂದಿಗೂ ಕಾವೇರಿ ಕಲಾಕ್ಷೇತ್ರ ವಿಸ್ತರಣೆಯೊಂದಿಗೆ ನವೀಕರಣ ವಾಗಲಿಲ್ಲ, ಅಭಿವೃದ್ಧಿಯೂ ಆಗಲಿಲ್ಲ. ಇಬ್ಬರ ಜಗಳದಲ್ಲಿ ನಗರದ ಜನತೆಗೆ ಲಾಭವಾಗದೆ ನಷ್ಟವಾಗುತ್ತ ಮುಂದುವರಿಯುತ್ತಿದೆ.
ಕಾವೇರಿ ಕಲಾಕ್ಷೇತ್ರ ಹಗ್ಗವಾಗಿದ್ದರೆ, ಅದರ ಎರಡೂ ತುದಿಗಳನ್ನು ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಹಿಡಿದು ಪರಸ್ಪರ ಹಗ್ಗ ಜಗ್ಗಾಟ ನಡೆಸಿದರು. ಆಡಳಿತ ಪಕ್ಷಕ್ಕೆ ನಗರದ ಜನರ ಹಿತದೃಷ್ಟಿಯಾದರೆ, ಬಿಜೆಪಿ ಸದಸ್ಯರಿಗೆ ಪ್ರತಿಷ್ಠೆಯಾಗಿತ್ತು. ಹೀಗೆ ಹಲವಾರು ಆಡಳಿತ ಮಂಡಳಿ ಸಭೆಗಳಲ್ಲಿ ಕಾವೇರಿ ಕಲಾಕ್ಷೇತ್ರ ಕಟ್ಟಡದ ಪುನರ್ ನಿರ್ಮಾಣದ ಬಗ್ಗೆ ಪರಸ್ಪರ ಚರ್ಚೆ, ಮಾತಿನ ಚಕಮಕಿ, ವಾಗ್ವಾದ, ಗೊಂದಲಗಳಾಗುತ್ತಲೇ ಆಗಿನ ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಗೆ ಅಂತ್ಯ ಹಾಡಿದರೇ ಹೊರತು, ಕಾವೇರಿ ಕಲಾಕ್ಷೇತ್ರವನ್ನು ಅಭಿವೃದ್ಧಿಪಡಿಸಲಿಲ್ಲ. ಹೀಗಾಗಿ ಇಂದು ಕಾವೇರಿ ಕಲಾಕ್ಷೇತ್ರ ಇನ್ನೇನು ಕುಸಿದು ನೆಲಸಮಗೊಂಡು ಎಲ್ಲರ ಮನಸಿನಿಂದ ಕಾವೇರಿ ಕಲಾ ಕ್ಷೇತ್ರ ಮಾಸಿಹೋಗಲಿದೆ ಎನ್ನಬಹುದು.
- ಎಂ. ಶ್ರೀಧರ್ ಹೂವಲ್ಲಿ, ಮಡಿಕೇರಿ