ಸೋಮವಾರಪೇಟೆ, ಸೆ. ೫: ಹಚ್ಚಹಸಿರಿನ ವನಸಿರಿ, ಆಹ್ಲಾದಕರ ವಾತಾವರಣ, ಸುಂದರ ಪ್ರಕೃತಿಯ ಸೌಂದರ್ಯ ಹೊಂದಿರುವ ಅರಣ್ಯದಂಚಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕೊಳೆತು ನಾರುವ ಕೋಳಿ ತ್ಯಾಜ್ಯ, ಖಾಲಿ ಬಾಟಲಿಗಳು, ಮೂಟೆಗಳಲ್ಲಿ ತುಂಬಿಸಿ ಎಸೆಯಲ್ಪಟ್ಟ ಕಸದಿಂದಾಗಿ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ತಮ್ಮ ಮನೆ, ಅಂಗಡಿಗಳ ಕಸವನ್ನು ಅರಣ್ಯದ ಅಂಚಿಗೆ ತಂದು ಸುರಿಯುತ್ತಿರುವ ದುರುಳರಿಂದಾಗಿ ಅರಣ್ಯ ಪ್ರದೇಶ ಪ್ಲಾಸ್ಟಿಕ್ ಮಯವಾಗುತ್ತಿದೆ.

ಸೋಮವಾರಪೇಟೆ ನಗರದಿಂದ ಅಬ್ಬೂರುಕಟ್ಟೆ ಮಾರ್ಗವಾಗಿ ಬಾಣಾವರಕ್ಕೆ ತೆರಳುವ ಮಾರ್ಗದಲ್ಲಿರುವ ಮಡಿಕೇರಿ ವಿಭಾಗಕ್ಕೆ ಸೇರಿದ ಶನಿವಾರಸಂತೆ ವಲಯದ ಮಾಲಂಬಿ ಮೀಸಲು ಅರಣ್ಯ ಹಾಗೂ ಯಡವನಾಡು ಅರಣ್ಯ ಪ್ರದೇಶದ ಬದಿ ಇಂತಹ ತ್ಯಾಜ್ಯಗಳು ಕಂಡುಬರುತ್ತಿವೆ.

ಅಬ್ಬೂರುಕಟ್ಟೆಯಿAದ ಗೋಣಿಮರೂರು ಗ್ರಾಮದವರೆಗಿನ ಅರಣ್ಯ ಪ್ರದೇಶದ ಸುಮಾರು ೧ ರಿಂದ ೨ ಕಿ.ಮೀ. ಅಂತರದಲ್ಲಿ ಕೋಳಿ ತ್ಯಾಜ್ಯ, ಹಳೆಯ ಬಟ್ಟೆ, ಗಾಜಿನ ಬಾಟಲ್, ಪ್ಲಾಸ್ಟಿಕ್ ಬಾಟಲ್, ಪಾದರಕ್ಷೆ, ಉಪಯೋಗಕ್ಕಿಲ್ಲದ ವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ರಸ್ತೆಯ ಬದಿಯಲ್ಲಿ ಎಸೆಯಲಾಗುತ್ತಿದೆ.

ಕೊಳೆತು ನಾರುವ ವಸ್ತುಗಳನ್ನು ಇಲ್ಲಿ ಹಾಕುತ್ತಿರುವದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದ್ದರೆ, ಚೀಲಗಳಲ್ಲಿರುವ ತ್ಯಾಜ್ಯಗಳನ್ನು ಬೀದಿ ನಾಯಿಗಳು ಎಳೆದಾಡುತ್ತಿರುತ್ತವೆ. ಅರಣ್ಯ ಪ್ರದೇಶದ ಎರಡೂ ಬದಿಗಳಲ್ಲಿ ತ್ಯಾಜ್ಯಗಳು ಕಂಡುಬರುತ್ತಿವೆ. ಮದುವೆ ಮನೆಯಲ್ಲಿ ಬಳಸಲ್ಪಡುವ, ಪ್ಲಾಸ್ಟಿಕ್ ತಟ್ಟೆ, ಲೋಟ, ಪಾದರಕ್ಷೆ ಸೇರಿದಂತೆ ನೂರಾರು ಸಂಖ್ಯೆಯ ಬಾಟಲ್‌ಗಳನ್ನು ಇಲ್ಲಿಗೆ ತಂದು ಎಸೆಯಲಾಗುತ್ತಿದೆ.

ಇಂತಹ ವಸ್ತುಗಳನ್ನು ವಾಹನಗಳಲ್ಲಿ ತಂದು ಈ ಪ್ರದೇಶದಲ್ಲಿ ಬಿಸಾಕುತ್ತಿದ್ದಾರೆ. ಕೋಳಿ ಅಂಗಡಿಯ ತ್ಯಾಜ್ಯಗಳನ್ನು ಸುರಿಯುತ್ತಿರುವ ಕಾರಣ ಅರಣ್ಯ ಪ್ರದೇಶದ ವಾತಾವರಣವೂ ಕೆಡುತ್ತಿದೆ. ಇದರೊಂದಿಗೆ ಯಡವನಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲೂ ಇಂತಹ ತ್ಯಾಜ್ಯಗಳು ಕಂಡುಬರುತ್ತಿವೆ. ಮನೆ, ಅಂಗಡಿ, ಸಮಾರಂಭದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಯಾವುದೇ ಅಳುಕಿಲ್ಲದೇ ಅರಣ್ಯ ಪ್ರದೇಶದಲ್ಲಿ ಎಸೆಯುತ್ತಿದ್ದು, ಇನ್ನಾದರೂ ಇಂತಹ ಮನಸ್ಥಿತಿ ಬದಲಾಗಲಿ; ಸುಂದರ ಅರಣ್ಯ ಪ್ರದೇಶವನ್ನು ಕಸದತೊಟ್ಟಿಯನ್ನಾಗಿ ಮಾರ್ಪಡಿಸದಿರಲಿ.