ಮಡಿಕೇರಿ, ಸೆ. ೫ : ಪ್ರತಿಯೊಬ್ಬರೂ ಜೀವನದಲ್ಲಿ ಒಳ್ಳೆಯ ಸಾಧನೆ ಮಾಡಲು ಶಿಕ್ಷಕರ ಸಲಹೆ ಮತ್ತು ಮಾರ್ಗದರ್ಶನ ಅತ್ಯಗತ್ಯ, ಆ ದಿಸೆಯಲ್ಲಿ ಗುರು-ಹಿರಿಯರನ್ನು ಸದಾ ಸ್ಮರಿಸಬೇಕು ಎಂದು ಜಿ.ಪಂ. ಸಿಇಓ ಭಂವರ್ ಸಿಂಗ್ ಮೀನಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಂತ ಮೈಕಲರ ಶಾಲೆಯಲ್ಲಿ ಭಾನುವಾರ ನಡೆದ ‘ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮನೆಯೇ ಮೊದಲ ಶಾಲೆ ಎಂಬAತೆ, ತಾಯಿ ಮೊದಲ ಗುರುವಾದರೆ, ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುತ್ತಾರೆ ಎಂದು ಸಿಇಓ ನುಡಿದರು.
ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಧರನ್ ಮಾತನಾಡಿ ಶಿಕ್ಷಕರ ದಿನಾಚರಣೆಯನ್ನು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಶಿಕ್ಷಕರಾಗಿ ದುಡಿದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಳ್ಳುವಂತಾಗಬೇಕು. ಒಬ್ಬ ಶಿಕ್ಷಕರಾಗಿ, ದಾರ್ಶನಿಕರಾಗಿ, ತತ್ವಜ್ಞಾನಿಯಾಗಿ ಬಹು ಎತ್ತರಕ್ಕೆ ರಾಧಾಕೃಷ್ಣನ್ ಅವರು ಬೆಳೆದರು. ಅವರ ಶ್ರಮ ಎಲ್ಲರಿಗೂ ಮಾದರಿ ಎಂದರು.
ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಎಚ್.ಎಸ್. ಚೇತನ್ ಮಾತನಾಡಿ ಪ್ರಾಥಮಿಕ ಶಾಲಾ ಶಿಕ್ಷಕರು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ,
(ಮೊದಲ ಪುಟದಿಂದ) ಕೋವಿಡ್ನಂತಹ ಆತಂಕದ ಪರಿಸ್ಥಿತಿಯಲ್ಲಿಯೂ ಶಿಕ್ಷಕರು ತಮ್ಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉ.ರಾ. ನಾಗೇಶ್ ಅವರು ಶಿಕ್ಷಣ ಮತ್ತು ಮಾಧ್ಯಮ ಕ್ಷೇತ್ರ ಸಮಾಜದಲ್ಲಿ ಎರಡು ಕಣ್ಣುಗಳಿದ್ದಂತೆ, ಈ ಎರಡು ಕ್ಷೇತ್ರಕ್ಕೆ ಸಮಾಜದಲ್ಲಿ ತಮ್ಮದೇ ಆದ ಸ್ಥಾನವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್, ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಎನ್. ಮಂಜುನಾಥ್ ಮಾತನಾಡಿದರು, ನಿವೃತ್ತ ಶಿಕ್ಷಕರ ಪರವಾಗಿ ರಾಮಚಂದ್ರ ಮಾತನಾಡಿದರು.
ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಸಂಘದ ಅಧ್ಯಕ್ಷ ಮನೋಹರ್ ನಾಯ್ಕ್ ಆರ್., ಮಡಿಕೇರಿ ತಾಲೂಕು ಪ್ರಾಥಾಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರಾಜೆ, ತಾಲೂಕು ಪ್ರೌ.ಶಾ.ಸ.ಶಿ. ಸಂಘದ ಅಧ್ಯಕ್ಷ ಮೆಹಬೂಬ್ ಸಾಬ್ ಎನ್.ಕೆ, ಅನುದಾನಿತ ಪ್ರೌ.ಶಾ. ನೌಕರರ ಸಂಘದ ಅಧ್ಯಕ್ಷ ವಿಲ್ಫ್ರೆಡ್ ಕ್ರಾಸ್ತಾ, ಕ.ರಾ.ಪ.ಜಾ.ಪ.ವ. ಪ್ರಾ.ಶಾ.ಶಿ.ಕ್ಷೇ ಸಂಘದ ಅಧ್ಯಕ್ಷೆ ಎಚ್.ಎಂ. ಪಾರ್ವತಿ ಹಾಗೂ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷ ರಾಜ್ಯಮಟ್ಟದಲ್ಲಿ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ರೇವತಿ ರಮೇಶ್ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಬಿ.ಎನ್. ಜಯಂತಿ, ಬಿ.ಟಿ. ಪೂರ್ಣೇಶ್, ಎಂ.ಜಿ. ಗಂಗಮ್ಮ, ಎನ್.ಟಿ. ಸತೀಶ್, ಕೆ.ಪಿ. ಕುಶಾಲಪ್ಪ, ಕ್ಲಿಫರ್ಡ್ ಗೀಡ್ವಿನ್ ಡಿಮೆಲ್ಲೊ, ಎಂ.ಪಿ. ವಿಶಾಲಾಕ್ಷಿ, ಎ.ಪಿ. ರಾಧಾ, ಉ.ರಾ. ನಾಗೇಶ್ ಇವರುಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಲಹರಿ ತಂಡದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ವಂದಿಸಿದರು.