ಕೂಡಿಗೆ, ಸೆ. ೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸರ್ವೆ ನಂಬರ್ ೫/೧ ರಲ್ಲಿ ಸಮುದಾಯ ಭವನಕ್ಕೆ ಕಳೆದ ೧೦ ವರ್ಷಗಳಿಂದ ಕಾಯ್ದಿರಿಸಿದ ಜಾಗದಲ್ಲಿ ರಾತೋರಾತ್ರಿ ಮನೆ ನಿರ್ಮಿಸಲಾಗಿದ್ದು, ಕಂದಾಯ ಇಲಾಖೆಯವರು ತಾಲೂಕು ಅಧಿಕಾರಿ ಸೂಚನೆಯಂತೆ ಪೊಲೀಸರ ರಕ್ಷಣೆಯಲ್ಲಿ ಕಟ್ಟಿದ ಗೋಡೆಯನ್ನು ತೆರವುಗೊಳಿಸಿದರು.

ಕಳೆದ ೪ ದಿನಗಳ ಹಿಂದೆ ಶಿವರಾಮ ಎಂಬವರು ಕಲ್ಲು ಮತ್ತು ಮಣ್ಣಿನ ರಾಶಿ ಹಾಕಿರುವುದನ್ನು ತೆರವುಗೊಳಿಸಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಯಿಷಾ ನೋಟೀಸ್ ಜಾರಿ ಮಾಡಿದ್ದರು. ನೋಟೀಸ್‌ನಲ್ಲಿ ೨ ದಿನಗಳ ಗಡುವು ನೀಡಲಾಗಿತ್ತು. ಆದರೆ ತೆರವುಗೊಳ್ಳದ ಕಾರಣದಿಂದ ಗ್ರಾಮಸ್ಥರು ಕ್ಷೇತ್ರದ ಶಾಸಕರ ಗಮನಕ್ಕೆ ತಂದಾಗ ಅವರ ಮೌಖಿಕ ಆದೇಶದಂತೆ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ರಾತೋರಾತ್ರಿ ಕಟ್ಟಿದ ಗೋಡೆಯನ್ನು ಕುಶಾಲನಗರ ಕಂದಾಯ ಇಲಾಖೆ ನಿರೀಕ್ಷಕ ಸಂತೋಷ್, ಕೂಡಿಗೆ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಕುಶಾಲನಗರ ಗ್ರಾಮಾಂತರ ಪೊಲೀಸ್ ಶಿವಶಂಕರ್ ಅವರ ರಕ್ಷಣೆಯಲ್ಲಿ ಗೋಡೆಯನ್ನು ತೆರವುಗೊಳಿಸಿದರು.

ಮಲ್ಲೇನಹಳ್ಳಿ ಗ್ರಾಮದ ೫/೧ ರಲ್ಲಿ ೫ ಸೆಂಟ್ ಜಾಗವನ್ನು ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸಮುದಾಯ ಭವನ ನಿರ್ಮಾಣಕ್ಕೆ ಕಾಯ್ದಿರಿಸಲಾಗಿತ್ತು. ಆ ಜಾಗದಲ್ಲಿ ಕಳೆದ ೧೦ ವರ್ಷಗಳಿಂದಲೂ ಗಣೇಶೋತ್ಸವ ಆಚರಣೆಯನ್ನು ಆಚರಿಸುತ್ತಾ ಬಂದಿರುತ್ತೇವೆ ಎಂದು ಗ್ರಾಮಸ್ಥರು ಹೇಳಿಕೆ ನೀಡಿರುತ್ತಾರೆ.

ಗೋಡೆ ತೆರವುಗೊಂಡ ಬಳಿಕ ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸಮುದಾಯ ಭವನಕ್ಕೆ ಕಾಯ್ದಿರಿಸಿದ ಜಾಗ ಎಂಬ ನಾಮ ಫಲಕವನ್ನು ಹಾಕಲಾಯಿತು.

ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್, ಉಪಾಧ್ಯಕ್ಷೆ ಮೋಹಿನಿ ತಮ್ಮಣೇಗೌಡ, ಸದಸ್ಯರಾದ ಟಿ.ಪಿ. ಹಮೀದ್, ಜಯಶ್ರೀ, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಅಭಿವೃದ್ಧಿ ಅಧಿಕಾರಿ ಎಂ.ಕೆ. ಅಯಿಷಾ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಇದ್ದರು.