ಸೋಮವಾರಪೇಟೆ, ಸೆ. ೬: ದೇಶದ ಬೆನ್ನೆಲುಬು ಎಂದು ರೈತರನ್ನು ಹೊಗಳುವ ಸರ್ಕಾರಗಳು ಅದೇ ರೈತನ ಬೆನ್ನುಮೂಳೆ ಮುರಿಯುವ ಕೆಲಸ ಮಾಡಿಕೊಂಡು ಬಂದಿವೆ. ಇನ್ನಾದರೂ ಸರ್ಕಾರಗಳು ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನಿಗದಿಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿ ತಾ. ೮ರಂದು ಪೂರ್ವಾಹ್ನ ೧೧ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ರಾಜೇಂದ್ರ ರಾಮಾಪುರ ಅವರು, ಕೇಂದ್ರ ಸರ್ಕಾರವು ಕೃಷಿ ನೀತಿಯನ್ನು ಬದಲಾಯಿಸಿ, ಜಿಡಿಪಿ ಆಧಾರದಲ್ಲಿ ಕೃಷಿಗೂ ಲಾಭದಾಯಕ ಬೆಲೆಯನ್ನು ನಿಗದಿಗೊಳಿಸಬೇಕು. ಈಗಿರುವ ಕನಿಷ್ಟ ಬೆಂಬಲ ಬೆಲೆ ಅವಶ್ಯಕತೆ ಇಲ್ಲ. ರೈತ ನೀತಿಯನ್ನು ಕಾನೂನಿನ ಒಳಗಡೆ ತರಬೇಕು ಎಂದು ಒತ್ತಾಯಿಸಿದರು.
ರೈತ ಬೆಳೆದ ಬೆಳೆಗೆ ಭದ್ರತೆ ಇರಬೇಕು. ಲಾಭದಾಯಕ ಬೆಲೆ ನಿಗದಿಯಾಗಬೇಕು. ಬೆಲೆಯಲ್ಲಿ ರೈತರಿಗೆ ಮೋಸ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಕಾನೂನಿನಡಿ ಪರಿಗಣಿಸಬೇಕು. ರೈತ ಬೆಳೆಯುವ ಬೆಳೆಗೆ ತಗಲುವ ವೆಚ್ಚ, ಸಾಗಾಟ ವೆಚ್ಚ, ಖರ್ಚು ಎಲ್ಲವನ್ನೂ ನಿರ್ಣಯಿಸಲು ಸಮಿತಿ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಈಗಾಗಲೇ ಕಿಸಾನ್ ಸಂಘದಿAದ ಪ್ರಧಾನಿ ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಲಾಗಿದೆ. ಕಳೆದ ಆಗಸ್ಟ್ನೊಳಗೆ ಅಭಿಪ್ರಾಯ ತಿಳಿಸುವುದಾಗಿ ಸಚಿವರು ಹೇಳಿದ್ದರು. ಆದರೆ ಕೇಂದ್ರ ಸರ್ಕಾರದಿಂದ ಈವರೆಗೆ ಯಾವುದೇ ನಿರ್ಣಯ ಬಂದಿಲ್ಲ. ಈ ಹಿನ್ನೆಲೆ ತಾ. ೮ರಂದು ದೇಶಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿ, ಡಿ.ಸಿ. ಮುಖಾಂತರ ಪ್ರಧಾನಿ ಹಾಗೂ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಕೇAದ್ರ ಸರ್ಕಾರ ಬಜೆಟ್ಗೂ ಮೊದಲು ಪೂರ್ವಭಾವಿ ಸಭೆ ನಡೆಸಿಲ್ಲ. ಕೃಷಿಕ್ಷೇತ್ರದಿಂದ ದೇಶಕ್ಕೆ ಲಾಭವಿದ್ದರೂ ರೈತರಿಗೆ ಸೌಲಭ್ಯಗಳನ್ನು ಕೊಡದೆ ವಂಚಿಸಲಾಗುತ್ತಿದೆ. ಮುಂದಿನ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತೀಶ್ ಮಾತನಾಡಿ, ಜಿಲ್ಲೆಯಲ್ಲಿ ಕಾಫಿ ವಾಣಿಜ್ಯ ಬೆಳೆ ಪಟ್ಟಿಯಲ್ಲಿದೆ. ಈ ಕಾರಣದಿಂದ ಸೂಕ್ತ ಸೌಲಭ್ಯವಿಲ್ಲದೆ ಕಾಫಿ ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ ತೋಟಗಳು ನಾಶವಾಗುತ್ತಿವೆ. ಕಾಫಿಯನ್ನು ಕೂಡಲೇ ಕೃಷಿ ಬೆಳೆಯೆಂದೇ ಪರಿಗಣಿಸಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಇತರ ಜಿಲ್ಲೆಗಳಲ್ಲಿ ಇರದ ಕಂದಾಯ ನೀತಿಗಳು ಕೊಡಗಿನಲ್ಲಿವೆ. ಬ್ರಿಟೀಷರ ಕಾಲದ ಟೆನ್ಯೂರ್ಗಳು ಇಂದಿಗೂ ಚಾಲ್ತಿಯಲ್ಲಿದ್ದು, ಇದರಿಂದಾಗಿ ಕೃಷಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜಮ್ಮಾ ಸಮಸ್ಯೆಯನ್ನು ಸ್ಥಳೀಯ ಅಧಿಕಾರಿಗಳು ಪರಿಹರಿಸುತ್ತಿಲ್ಲ. ಇದರೊಂದಿಗೆ ರೈತರ ಖಾತೆಗಳ ಸಮಸ್ಯೆಯೂ ಹೆಚ್ಚಿದೆ. ಜಿಲ್ಲೆಯ ಶೇ.೬೦ರಷ್ಟು ರೈತರು ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಈ ಹಿನ್ನೆಲೆ ಟೆನ್ಯೂರ್ಗಳನ್ನು ಸರಳೀಕರಿಸಿ, ಹಿಡುವಳಿದಾರರಿಗೆ ಖಾತೆ ಮಾಡಿಕೊಡಬೇಕು. ಈ ಬಗ್ಗೆ ಕಿಸಾನ್ ಸಂಘದ ನಿಯೋಗ ಸದ್ಯದಲ್ಲೇ ಸರ್ಕಾರವನ್ನು ಭೇಟಿ ಮಾಡಲಿದೆ ಎಂದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಮುಖ್ ಚಿ.ನಾ.ಸೋಮೇಶ್, ತಾಲೂಕು ಪ್ರಮುಖ್ ಅರುಣ್ ರೈ ಉಪಸ್ಥಿತರಿದ್ದರು.