ಕೂಡಿಗೆ, ಸೆ. ೬: ಕಳೆದ ೨೦ ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಯಿಂದ ನೀರು ಹರಿಸುವಿಕೆ ಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿ ಇರುವುದರಿಂದ ಅಣೆಕಟ್ಟೆಯಿಂದ ವಿದ್ಯುತ್ ಘಟಕದ ಮೂಲಕ ೬೫೦೦ ಕ್ಯೂಸೆಕ್ ನೀರನ್ನು ನದಿಗೆ ಭಾನುವಾರ ರಾತ್ರಿಯಿಂದ ಹರಿಸಲಾಗುತ್ತಿದೆ.

ಹಾರಂಗಿ ಅಣೆಕಟ್ಟೆಯು ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾನಯನ ನೀರಿನ ಮಟ್ಟದ ಅನುಗುಣವಾಗಿ ಮತ್ತು ಅಣೆಕಟ್ಟೆಯ ಹಿತದೃಷ್ಟಿಯಿಂದ ನೀರಿನ ಸಮತೋಲನವನ್ನು ನೋಡಿಕೊಂಡು, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿಯಾದ ನೀರನ್ನು ವಿದ್ಯುತ್ ಘಟಕದ ಮೂಲಕ ಹರಿಸಲಾಗುತ್ತಿದೆ ಎಂದು ನೀರಾವರಿ ಇಲಾಖೆಯ ಹಾರಂಗಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.