ಸೋಮವಾರಪೇಟೆ, ಸೆ. ೬: ಸಂತೆ ದಿನವಾದ ಸೋಮವಾರದಂದು ಪಟ್ಟಣದ ಬಹುತೇಕ ರಸ್ತೆಗಳ ಬದಿಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಯಾಗಿ ನಿಲುಗಡೆಗೊಳಿಸುತ್ತಿರುವ ಹಿನ್ನೆಲೆ ಸಂಚಾರಕ್ಕೆ ಅಡಚಣೆ ಯಾಗುತ್ತಿದೆ. ಕೆಲವೊಂದು ರಸ್ತೆಗಳ ಎರಡೂ ಬದಿಯಲ್ಲಿ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಇತರ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ.

ಪಟ್ಟಣದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದ್ದು ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಗಿದೆ. ಸಂತೆ ದಿನವಾದ ಸೋಮವಾರದಂದು ಪಟ್ಟಣದಲ್ಲಿ ವಾಹನ ನಿಲುಗಡೆಗೆ ಹೆಚ್ಚು ತೊಂದರೆ ಆಗುತ್ತಿದೆ. ಪಟ್ಟಣದಿಂದ ಮಹದೇಶ್ವರ ಬಡಾವಣೆ, ಹೊಸಬಡಾವಣೆ ಮತ್ತು ಜನತಾ ಕಾಲೋನಿಗೆ ತೆರಳುವ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿರುವುದರಿಂದ ಸಂಚಾರ ವ್ಯವಸ್ಥೆ ಹಾಗೂ ಪಾದಚಾರಿಗಳಿಗೂ ತೊಂದರೆ ಆಗುತ್ತಿದೆ.

ಇದಕ್ಕೆ ಸಂಬAಧಿಸಿದAತೆ ಪೋಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಗೆ ಪುಕಾರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಡಾವಣೆ ನಿವಾಸಿಗಳಾದ ಮಂಜುನಾಥ್, ಗಿರೀಶ್, ಧನಂಜಯ ಮತ್ತಿತರರು ತಿಳಿಸಿದ್ದಾರೆ.

ಪಟ್ಟಣದ ರಸ್ತೆಗಳ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆಗೆ ಪೊಲೀಸರು ಅವಕಾಶ ಕಲ್ಪಿಸಬಾರದು. ಸಂತೆ ದಿನದಂದು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.