ಮಡಿಕೇರಿ, ಸೆ. ೬: ಇತ್ತೀಚಿನ ದಿನಗಳಲ್ಲಿ ಅರೆಭಾಷಿಕರು ಕ್ರೀಡೆ, ಸಾಹಿತ್ಯ, ಸಂಸ್ಕೃತಿ, ರಾಜಕೀಯ ಹೀಗೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿ ಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಜಿ.ಪಂ.ಮಾಜಿ ಸದಸ್ಯ ಬಳ್ಜೆಂಟ್ಟಿ ಧನ್ಯರತಿ ಅವರು ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಪಿರಿಯಾಪಟ್ಟಣ ಕೊಡಗು ಗೌಡ ಸಮಾಜ ಇವರ ಸಹಯೋಗದಲ್ಲಿ ಪಿರಿಯಾಪಟ್ಟಣದ ಗೌಡ ಸಮಾಜದಲ್ಲಿ ನಡೆದ ಅರೆಭಾಷೆ ಸಂಸ್ಕೃತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿದ್ಯೆ ಕಲಿತರೆ ಮಾತ್ರ ಮನುಷ್ಯ ಆಗೊಲ್ಲ. ಮಕ್ಕಳಿಗೆ ಸಂಸ್ಕಾರ ಹೇಳಿಕೊಟ್ಟರೆ ಮಾತ್ರ ಅಪ್ಪ ಅಮ್ಮಂದಿರ

(ಮೊದಲ ಪುಟದಿಂದ) ಕಾರ್ಯ ಪೂರ್ಣವಾಗುತ್ತದೆ ಎಂದರು. ಗೌಡ ಸಮಾಜದ ಮಾಜಿ ಅಧ್ಯಕ್ಷ ಮೇಡ್ತನ ಶಿವಾಜಿ ಮಾತನಾಡಿ, ಎಲ್ಲರ ಹಿತಾಸಕ್ತಿಯಿಂದ ಇಂದು ಅಕಾಡೆಮಿ ಸ್ಥಾಪನೆ ಆಗಿದೆ. ಇದರ ಮೂಲಕ ಬಹಳಷ್ಟು ಉತ್ತಮ ಕಾರ್ಯ ಆಗುತ್ತಿದೆ. ಇನ್ನಷ್ಟು ಶಿಬಿರಗಳು ಆಗಬೇಕು. ಅರೆಭಾಷೆ ಸಂಸ್ಕೃತಿ ಮತ್ತು ಆಚರಣೆ ಮುಂದಿನ ಪೀಳಿಗೆಗೆ ಮುಂದುವರೆಯಬೇಕು ಎಂದು ಅಭಿಪ್ರಾಯಪಟ್ಟರು.

ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ಹಿಂದಿನ ಕಾಲದಲ್ಲಿ ಶಿಕ್ಷಣ ಇಲ್ಲದೇ ಇದ್ದರು ನಮ್ಮ ಪೂರ್ವಜರು ಬಹಳ ಚೆನ್ನಾಗಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ದ್ದರು. ಇಂದು ನಾವು ಶಿಕ್ಷಿತರಾದರು ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಇದು ಬಹಳ ನೋವಿನ ಸಂಗತಿ, ಇಂದು ಅಕಾಡೆಮಿಯ ದಶವರ್ಷದ ಸಂಭ್ರಮದ ಅಂಗವಾಗಿ ಕನಿಷ್ಟ ಹತ್ತು ಕಡೆಯಾದರೂ ಸಂಸ್ಕೃತಿ ಶಿಬಿರವನ್ನು ನಡೆಸಬೇಕೆಂಬ ಉದ್ದೇಶದಿಂದ ಈ ತರಹದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ ಎಂದರು.

ಪಿರಿಯಾಪಟ್ಟಣ ಗೌಡ ಸಮಾಜದ ಅಧ್ಯಕ್ಷ ಪೊಕ್ಕಳಂಡ ವಸಂತ್ ಕುಮಾರ್ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ತಳೂರು ಯಶೋಧ ಸೋಮಣ್ಣ, ಕುಲ್ಲಚೆಟ್ಟಿ ಪೂವಯ್ಯ, ಕೋಲ್ಪೆ ದೇವಕ್ಕಿ ಹಾಜರಿದ್ದರು. ಅಕಾಡೆಮಿ ಸದಸ್ಯ ಧನಂಜಯ ಅಗೋಳಿಕಜೆ ಕಾರ್ಯಕ್ರಮ ನಿರೂಪಿಸಿದರು. ಕೋಳ್ಪೆ ದೇವಕ್ಕಿ ಹಾಗೂ ಮಳ್ಳನ ಯಶೋಧ ಪ್ರಾರ್ಥಿಸಿ, ಮಳ್ಳನ ವೇದಾವತಿ ಸ್ವಾಗತಿಸಿದರು.