ಸೋಮವಾರಪೇಟೆ, ಸೆ. ೬: ತಾಲೂಕಿನ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ೧೦ ಮಂದಿ ಜೂಜುಕೋರರನ್ನು ಬಂಧಿಸುವಲ್ಲಿ ಶನಿವಾರಸಂತೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಅನೇಕ ಸಮಯಗಳಿಂದ ಅಕ್ರಮವಾಗಿ ಜೂಜಾಡುತ್ತಿದ್ದ ಜೂಜುಕೋರರನ್ನು ಹೆಡೆಮುರಿ ಕಟ್ಟುವಲ್ಲಿ ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಅವರ ನೇತೃತ್ವದ ತಂಡ ಯಶಸ್ವಿಯಾಗಿದೆ. ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಬೆಸೂರು-ದೆಜಡ್ಡ ಭಂಡಾರ ರಸ್ತೆ ಬದಿಯ ಕಾಡು ಪೊದೆಯಲ್ಲಿ ಇಸ್ಪೀಟ್ ಆಡುತ್ತಿದ್ದ ೧೦ ಮಂದಿ ಜೂಜುಕೋರರ ತಂಡವನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈ ಸಂದರ್ಭ ಮೂವರು ಜೂಜುಕೋರರು ಸ್ಥಳದಿಂದ ಓಡಿ ತಲೆಮರೆಸಿ ಕೊಂಡಿದ್ದಾರೆ. ಸ್ಥಳದಲ್ಲಿ ಪಣಕ್ಕಿಟ್ಟಿದ್ದ ರೂ. ೩೦,೪೫೦ ನಗದು ಮತ್ತು ೧ ಕಾರು ಹಾಗೂ ೭ ಬೈಕ್ ಸಹಿತ ೧ ಸ್ಕೂಟರ್ ಅನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿ ವಶಪಡಿಸಿಕೊಂಡ ನಗದು ಸೇರಿದಂತೆ ಇತರ ಮಾಲುಗಳ ಮೌಲ್ಯ ರೂ. ೬.೫೦ ಲಕ್ಷ ಎಂದು ಪೊಲೀಸರು ಎಫ್.ಐ.ಆರ್.ನಲ್ಲಿ ತಿಳಿಸಿದ್ದಾರೆ. ಅಕ್ರಮವಾಗಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲೂರು ಗ್ರಾಮದ ತ್ಯಾಗರಾಜ ಅಲಿಯಾಸ್ ಟೇಕಿ, ಗಣೇಶ್, ಪುಟ್ಟನಂಜಯ್ಯ, ನಿಲುವಾಗಿಲು ಗ್ರಾಮದ ಚಂದ್ರಶೇಖರ್, ಚಿಕ್ಕಭಂಡಾರ ಗ್ರಾಮದ ರಘು, ಚಿಕ್ಕಕುಂದ ಗ್ರಾಮದ ನವೀನ್, ಕೂಡ್ಲೂರು ಗ್ರಾಮದ ರವಿ ಅಲಿಯಾಸ್ ಧರಣೇಶ್, ಜನಾರ್ಧನ ಹಳ್ಳಿಯ ಜಗದೀಶ್, ದೆಜಡ್ಡ ಭಂಡಾರದ ಶಿವ ಜನಾರ್ಧನ ಹಳ್ಳಿಯ ಯಶವಂತ್ ಅವರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೂಜಾಟ ನಡೆಸುತ್ತಿದ್ದ, ಇಸ್ಪೀಟ್ ದಂಧೆಯ ಪ್ರಮುಖ ಕೆಂಪ ಅಲಿಯಾಸ್ ಲೋಕೇಶ್, ಪ್ರಸಾದ್ ಹಾಗೂ ನೀರುಗುಂದ ಗ್ರಾಮದ ಪಾಲಾಕ್ಷ ಅವರುಗಳು ಇಸ್ಪೀಟ್ ಆಡುತ್ತಿದ್ದ ಸ್ಥಳದಿಂದ ಓಡಿ ತಲೆಮರೆಸಿಕೊಂಡಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ಡಿವೈಎಸ್ಪಿ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯ ನೇತೃತ್ವವನ್ನು ಶನಿವಾರಸಂತೆಯ ಪೊಲೀಸ್ ಇನ್‌ಸ್ಪೆಕ್ಟರ್ ಪರಶಿವ ಮೂರ್ತಿ, ಸಿಬ್ಬಂದಿ ಗಳಾದ ಡಿಂಪಲ್, ಶಶಿಕುಮಾರ್, ಪರಮೇಶ್, ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.