ಮಡಿಕೇರಿ, ಸೆ. ೬: ಕೊಡಗು ಜಿಲ್ಲೆಯಲ್ಲಿ ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಜಿಲ್ಲೆಯ ತುಳು ಕೂಟದ ಸಹಕಾರದೊಂದಿಗೆ ತುಳು ಭಾಷೆ ಕಾರ್ಯಕ್ರಮ ನಡೆಸಲು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ದಯಾನಂದ್ ಜಿ. ಕತ್ತಲ್‌ಸರ್ ತಿಳಿಸಿದರು.
ನಗರದ ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಸೇರಿದಂತೆ ತುಳು, ಸಂಸ್ಕೃತಿ, ಸಾಹಿತ್ಯ, ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ ಎಂದರು.
ತುಳು ಸಾಹಿತ್ಯ ಅಕಾಡೆಮಿಯಿಂದ ನಿರಂತರ ಕಾರ್ಯಕ್ರಮ ನಡೆಯುತ್ತಿದ್ದು, ತುಳು ಭಾಷಿಕರು ಹೆಚ್ಚು ಇರುವ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ತುಳು ಭಾಷೆ ರಾಜ್ಯದ ತೃತೀಯ ಐಚ್ಛಿಕ ಭಾಷೆಯಾಗ ಬೇಕು. ೮ನೇ ಪರಿಚ್ಛೇದಕ್ಕೆ ಸೇರ ಬೇಕೆಂಬ ತುಳುವರ ಬೇಡಿಕೆಯಾಗಿದ್ದು, ಈ ವಿಷಯದಲ್ಲಿ ಅಕಾಡೆಮಿ ಕಾರ್ಯಪ್ರವೃತ್ತವಾಗಿದೆ. ತುಳುಭಾಷೆಗೆ ಸೂಕ್ತ ಸ್ಥಾನಮಾನ ದೊರಬೇಕಿದೆ ಎಂದರು.
ತುಳುವೆರ ಜನಪದ ಕೂಟದ ಬಿ. ಐತ್ತಪ್ಪ ರೈ ಮಾತನಾಡಿ, ಜಿಲ್ಲೆಯಲ್ಲಿ ತುಳು ಭಾಷಿಕರ ಸಂಘಟನೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇವೆ. ತುಳುಭಾಷೆ ಮತ್ತು ಸಂಸ್ಕತಿಯ ಉಳಿವಿಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವು ದೆಂದು ತಿಳಿಸಿದರು.
ಅಕಾಡೆಮಿಯ ಸದಸ್ಯ ನಾಗೇಶ್ ಕುಲಾಲ್, ಜಿಲ್ಲಾ ಜನಪದ ಕೂಟದ ಉಪಾಧ್ಯಕ್ಷ ಬಿ.ವೈ. ಆನಂದರಘು, ತುಳುವೆರ ಜನಪದ ಕೂಟದ ಸ್ಥಾಪಕ ಅಧ್ಯಕ್ಷ ಶೇಖರ್ ಬಂಡಾರಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ. ರವಿ, ಕಡಬ ದಿನೇಶ್, ನರೇಂದ್ರ ಕೆರೆಕಾಡು, ಜಿ.ಪಂ. ಮಾಜಿ ಅಧ್ಯಕ್ಷ ಬಿ. ಶಿವಪ್ಪ, ಹಿರಿಯ ಸಲಹೆಗಾರ ಕೆ.ಆರ್. ಬಾಲಕೃಷ್ಣ ರೈ, ನಗರಸಭೆ ಸದಸ್ಯ ಓಂಕಾರ್, ಚಂದ್ರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಕೊಡಗು ಜಿಲ್ಲೆಯ ತುಳುವೆರ ಜನಪದ ಕೂಟದ ನೂತನ ಅಧ್ಯಕ್ಷ ಬಿ.ಬಿ. ಐತ್ತಪ್ಪ ರೈ ಮತ್ತು ಸ್ಥಾಪಕ ಅಧ್ಯಕ್ಷ ಶೇಖರ್ ಭಂಡಾರಿಯವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಜಿಲ್ಲಾ ಸಮಿತಿಯ ಸದಸ್ಯ ಗೌತಮ್ ಶಿವಪ್ಪ, ಎಂ.ಡಿ. ನಾಣಯ್ಯ, ಬಿ.ಕೆ.ಮೋಹನ್, ಲೀಲಾಶೇಷಮ್ಮ, ನಗರ ಘಟಕ ಅಧ್ಯಕ್ಷೆ ವಿಜಯಲಕ್ಷಿö್ಮ ರವಿಶೆಟ್ಟಿ, ನಿರ್ದೇಶಕರು ಗಳಾದ ಜಗದೀಶ್ ಆಚಾರ್ಯ, ಮಂಜುನಾಥ್, ಎಸ್.ಎನ್ ರಘು, ಬಿ.ಎಂ. ದಾಮೋದರ, ಅಶೋಕ್ ಆಚಾರ್ಯ, ಪ್ರಸಾದ್, ಚಿತ್ರಾವತಿ, ರಮೇಶ್ ಆಚಾರ್ಯ ಸೇರಿದಂತೆ ವಿವಿಧ ಸಮಾಜದ ಪ್ರಮುಖರು ಪಾಲೊಂಡಿದ್ದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ. ರವಿ ನಿರೂಪಿಸಿ ಸ್ವಾಗತಿಸಿದರು. ಜಿಲ್ಲಾ ಸದಸ್ಯ ಸತೀಶ್ ಕುಂದರ್ ವಂದಿಸಿದರು.