ಕಣಿವೆ, ಸೆ. ೬ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಕೆರೆ ದಂಡೆಯ ಮೇಲೆ ಊರಿನವರೆಲ್ಲಾ ಕಸ ತ್ಯಾಜ್ಯ, ಕಲ್ಲು ಬಂಡೆಗಳನ್ನು ಸುರಿದರೂ ಕೂಡ ಪ್ರಶ್ನಿಸದೇ ಮೌನ ವಹಿಸದ ಗ್ರಾಮ ಪಂಚಾಯಿತಿ, ಇದೀಗ ಆನೆಕೆರೆ ದಂಡೆಯ ಸ್ವಚ್ಛತೆಯ ಹೆಸರಲ್ಲಿ ಹಣವನ್ನು ಪೋಲು ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಶಕ್ತಿ ಯೊಂದಿಗೆ ಪ್ರತಿಕ್ರಿಯಿಸಿದ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ವಿ.ಸಣ್ಣಪ್ಪ, ಪುಟ್ಟರಾಜು ಮೊದಲಾದವರು ಕಿರಿದಾಗಿದ್ದ ಆನೆಕೆರೆ ಏರಿಯನ್ನು ಇದೀಗ ವಿಶಾಲಗೊಳಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಿದೆ. ಆದರೆ ಸುತ್ತಮುತ್ತಲಿನ ಮಂದಿ ತಮ್ಮ ಮನೆಯ ಅನುಪಯುಕ್ತ ತ್ಯಾಜ್ಯಗಳು ಹಾಗೂ ಜಮೀನಿನಲ್ಲಿನ ಕಲ್ಲುಬಂಡೆಗಳನ್ನು ತಂದು ಈ ಕೆರೆ ಏರಿಯ ಮೇಲೆ ರಾಶಿ ರಾಶಿ ಹಾಕಿದರೂ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳದೇ ಎಚ್ಚರಿಕೆಯನ್ನೂ ಕೂಡ ನೀಡದೇ ಮೌನ ವಹಿಸುವ ಪಂಚಾಯಿತಿ ಆಡಳಿತ ಕೆರೆ ಏರಿಯನ್ನು ಸ್ವಚ್ಛಗೊಳಿಸುವ ಹೆಸರಲ್ಲಿ ಸಾರ್ವಜನಿಕರ ತೆರಿಗೆಯ ಹಣವನ್ನು ಪೋಲು ಮಾಡುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಲೇ ಆನೆಕೆರೆಯ ವಿಶಾಲವಾದ ಏರಿಯ ಮೇಲೆ ಪರಿಸರ ಸ್ನೇಹಿ ಗಿಡಗಳನ್ನು ಪಂಚಾಯಿತಿ ವತಿಯಿಂದ ನೆಟ್ಟು ಪೋಷಿಸಬೇಕು. ಅಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ಗಾಳಿವಿಹಾರದೊಂದಿಗೆ ವಿರಮಿಸುವ ಆಸನಗಳನ್ನು ಅಳವಡಿಸಬೇಕೆಂದು ಸಣ್ಣಪ್ಪ ಒತ್ತಾಯಿಸಿದ್ದಾರೆ. ಕೆರೆ ಏರಿಯ ಮೇಲೆ ತ್ಯಾಜ್ಯ, ಕಸದ ರಾಶಿ ಹಾಕುವವರನ್ನು ಪತ್ತೆ ಹಚ್ಚಿ ಅಂತಹವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು ಎಂದು ಪುಟ್ಟರಾಜು ಆಗ್ರಹಿಸಿದ್ದಾರೆ. -ಮೂರ್ತಿ