ಮಡಿಕೇರಿ, ಸೆ. ೨೧: ಕನ್ನಡ ಉಳಿದರೆ ಸಂಸ್ಕೃತಿ ಉಳಿಯುತ್ತದೆ ಕನ್ನಡದ ನಾಡು ನುಡಿ, ವಿಶಿಷ್ಟ ಪರಂಪರೆ ಸಾಹಿತ್ಯದ ಕುರಿತು ಇಂದಿನ ಪೀಳಿಗೆಗೆ ತಿಳಿಪಡಿಸುವ ಜವಾಬ್ದಾರಿ ಪರಿಷತ್ತಿನದು ಎಂದು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕವನ್ನು ಉದ್ಘಾಟಿಸಿ ಕಲ್ಲುಮಠದ ಶ್ರೀ ನಿ.ಪ್ರ.ಸ್ವ ಮಹಂತ ಸ್ವಾಮಿಜಿಗಳು ನುಡಿದರು. ಮುಂದುವರಿದ ಅವರು ಸಾಹಿತ್ಯ ಪರಿಷತ್ತು ಸದಸ್ಯತ್ವ ಆಂದೋಲನ ಮೂಲಕ ಸಂಸ್ಥೆಯನ್ನು ಗಟ್ಟಿಯಾಗಿ ಕಟ್ಟುತ್ತಿರುವುದು ಶ್ಲಾಘನೀಯ ಎಂದು ನುಡಿದರು. ವೇದಿಕೆಯಲ್ಲಿ ಅವರ ಸದಸ್ಯತ್ವವನ್ನು ಕಸಾಪದ ಆ್ಯಪ್ ಮೂಲಕ ನೋಂದಾಯಿಸುವ ಮುಖಾಂತರ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ಎಲ್ಲ ಹೋಬಳಿಗಳಲ್ಲಿ ಪರಿಷತ್ತಿನ ಘಟಕ ಸ್ಥಾಪಿಸುತಿದ್ದು ಈಗಾಗಲೇ ಎಂಟು ಹೋಬಳಿ ಘಟಕಗಳು ಪ್ರಾರಂಭಿಸಲಾಗಿದ್ದು ಉಳಿದ ಘಟಕಗಳನ್ನು ಸಧ್ಯದಲ್ಲೇ ಪ್ರಾರಂಭಿಸಲಾಗುವುದು ಎಂದರು. ಹೋಬಳಿಯ ನೂತನ ಅಧ್ಯಕ್ಷ ಬಿ.ಪಿ. ಶಾಂತಮಲ್ಲಪ್ಪ ಅವರಿಗೆ ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ನಿಕಟಪೂರ್ವ ಅಧ್ಯಕ್ಷ ಅಬ್ದುಲ್‌ರಬ್ ಅವರ ಉಪಸ್ಥಿತಿಯಲ್ಲಿ ಪರಿಷತ್ತಿನ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು.

ನೂತನ ಸಮಿತಿಯ ಗೌರವ ಕಾರ್ಯದರ್ಶಿಗಳಾಗಿ ಡಿ.ಹೆಚ್. ಶಾಂತಕುಮಾರ್, ಜಿ.ಪಿ. ಕವಿತ, ಕೋಶಾಧಿಕಾರಿಯಾಗಿ ಡಾ. ಉದಯ ಕುಮಾರ್ ನಿಯೋಜನೆಗೊಂಡರು. ಹೋಬಳಿಯ ನೂತನ ಪದಾದಿಕಾರಿಗಳಿಗೆ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕೊಡಗು ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಮಾತನಾಡಿದ ಅವರು ಪರಿಷತ್ತಿನಲ್ಲಿ ತೆಗೆದುಕೊಳ್ಳುವ ಜವಾಬ್ದಾರಿ ಕೇವಲ ಹೆಸರಿಗೆ ಮಾತ್ರ ಅಲ್ಲ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಂಸ್ಥೆಯನ್ನು ಬಲಪಡಿಸಬೇಕು ಎಂದರು.

ಹೋಬಳಿಯ ನಿಕಟಪೂರ್ವ ಅಧ್ಯಕ್ಷ ಅಬ್ದುಲ್‌ರಬ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಹೋಬಳಿ ಘಟಕದ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶೋಬಿತ್ ಗೌಡ ಮಾತನಾಡಿ ಸಾಹಿತಿ ಪರಿಷತ್ತಿನ ಎಲ್ಲ ಕಾರ್ಯಗಳಿಗೆ ಪಂಚಾಯಿತಿಯು ಸಹಕರಿಸುವುದಾಗಿ ನುಡಿದರು.

ನೂತನ ಅಧ್ಯಕ್ಷ ಮಾತನಾಡಿ ಎಲ್ಲರ ಸಹಕಾರ ಕೋರಿದರು. ಕೊಡ್ಲಿಪೇಟೆ ಹೋಬಳಿಯ ೨೦೨೧-೨೨ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಶೇ. ೧೦೦ ಅಂಕ ಪಡೆದ ೫ ವಿದ್ಯಾರ್ಥಿಗಳನ್ನು ಮತ್ತು ಶೇ. ೯೯ ಅಂಕ ಪಡೆದ ೬ ವಿದ್ಯಾರ್ಥಿ ಗಳನ್ನು ಗೌರವಿಸಿ ಅವರಿಗೆ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ನೀಡಲಾಯಿತು. ಜಿಲ್ಲಾ ಉತ್ತಮ ಶಿಕ್ಷಕಿ ನ್ಯಾಯದಹಳ್ಳ ಶಾಲೆಯ ಮಂಜುಳಾಮಣಿ ಮತ್ತು ಜಾನಪದ ಕಲಾವಿದ ಬೆಸೂರು ಶಾಂತೇಶ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಮುಖ್ಯ ಅತಿಥಿಗಳಾದ ನಿವೃತ್ತ ಮುಖ್ಯ ಶಿಕ್ಷಕ ಟಿ.ಎನ್ ಶಿವ ಕುಮಾರ್, ನೂತನ ಕೋಶಾಧಿಕಾರಿ ಡಾ. ಸಿ.ಆರ್. ಉದಯಕುಮಾರ್ ಮತ್ತು ಸದಸ್ಯ ಕೆ.ಎಸ್. ಪರಮೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶನಿವಾರ ಸಂತೆ ಹೋಬಳಿ ಅಧ್ಯಕ್ಷ ಬಿ.ಬಿ. ನಾಗರಾಜ್, ಶಾಂತಳ್ಳಿ ಹೋಬಳಿ ಅಧ್ಯಕ್ಷ ಸಿ.ಎಸ್. ನಾಗರಾಜ್, ವಿ.ಟಿ. ಮಂಜುನಾಥ್, ಶಿವಣ್ಣ, ಕೊಡ್ಲಿಪೇಟೆ ಕಸಾಪ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಕಿರಣ್ ನಿರೂಪಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಭಗವಾನ್ ಸ್ವಾಗತಿಸಿ, ಕಾರ್ಯದರ್ಶಿ ಶಾಂತಕುಮಾರ್ ವಂದಿಸಿದರು.