ಮಡಿಕೇರಿ, ಸೆ. ೨೦: ರಾಜ್ಯಾದ್ಯಂತ ಇರುವ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರು, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರನ್ನು ವಿಶೇಷ ನೇಮಕಾತಿ ನಿಯಮಗಳಡಿ ಸರಕಾರೀ ನೌಕರರೆಂದು ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ರಾಜ್ಯಾದ್ಯಂತ ೧೧,೧೩೩ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದ್ದು, ಈ ಪೈಕಿ ಕೊಡಗು ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಲ್ಲಿ ಕೆಲಸ ಮಾಡಿಕೊಂಡಿರುವ ೧೩೫ ಕಾರ್ಮಿಕರಿದ್ದು, ಸರಕಾರದ ಮಾರ್ಗಸೂಚಿ ಹಾಗೂ ನಿಯಮಗಳಡಿ ಕೆಲವು ಮಂದಿಗೆ ಈ ಭಾಗ್ಯ ಲಭ್ಯವಾಗಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಹತ್ತು ಮಹಾನಗರ ಪಾಲಿಕೆ ಹಾಗೂ ೩೦೨ ನಗರ, ಪಟ್ಟಣ
(ಮೊದಲ ಪುಟದಿಂದ) ಪಂಚಾಯ್ತಿಯಲ್ಲಿ ಕೆಲಸ ಮಾಡುತ್ತಿರುವ ಒಟ್ಟು ೨೬ಸಾವಿರ ಪೌರ ಕಾರ್ಮಿಕರ ಪೈಕಿ ಬಿಬಿಎಂಪಿಯ ೩೬೭೩, ನಗರಸಭೆ, ಪುರಸಭೆಗಳಲ್ಲಿನ ೫೫೩೩, ಮಹಾನಗರ ಪಾಲಿಕೆಗಳಲ್ಲಿನ ೧೯೨೭ ಸೇರಿದಂತೆ ೧೧೧೩೩ ಪೌರ ಕಾರ್ಮಿಕರು, ಹೊರ ಗುತ್ತಿಗೆ ನೌಕರರು ಸೇವಾ ಖಾಯಮಾತಿ ಪಡೆಯಲಿದ್ದಾರೆ. ಸರಕಾರಿ ನೌಕರರೆಂದು ಪರಿಗಣನೆಗೆ ಒಳಪಡಲಿದ್ದು, ಪ್ರಸ್ತುತ ಇರುವ ೧೭೦೦೦ ದಿಂದ ೨೮೯೮೦ ವೇತನ ಶ್ರೇಣಿಯಡಿಯಲ್ಲಿ ಸೇವೆ ಸಲ್ಲಿಸುವಂತೆ ಅವಕಾಶ ಕಲ್ಪಿಸಲಾಗಿದೆ. ಎಲ್ಲ ಕಾರ್ಮಿಕರನ್ನು ಖಾಯಂಗೊಳಿಸಲು ಆರ್ಥಿಕ ಬಲವೂ ಅವಶ್ಯವಾಗಿದ್ದು, ಈಗಾಗಲೇ ರಾಜ್ಯ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ವಾರ್ಷಿಕ ರೂ.೨೫೦ಕೋಟಿ ವೆಚ್ಚವಾಗಲಿದೆ. ಹಂತ ಹಂತವಾಗಿ ಎಲ್ಲ ಕಾರ್ಮಿಕರ ಸೇವೆ ಖಾಯಂಗೊಳಿಸಲು ಸರಕಾರ ತೀರ್ಮಾನ ತೆಗೆದುಕೊಂಡಿದೆ.
ಕೊಡಗು ಜಿಲ್ಲೆಯಲ್ಲಿ ೧೩೫ ಮಂದಿ
ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಪೌರ ಕಾರ್ಮಿಕರು, ಹೊರಗುತ್ತಿಗೆ ನೌಕರರಾಗಿ ಒಟ್ಟು ೧೩೫ ಮಂದಿ ಕೆಲಸ ಮಾಡುತ್ತಿದ್ದಾರೆ. ಮಡಿಕೇರಿ ನಗರಸಭೆಯಲ್ಲಿ ೧೮ಮಂದಿ ಕಾಯಂ ನೌಕರರಾಗಿ ಹಾಗೂ ೨೦ ಮಂದಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ವೀರಾಜಪೇಟೆ ಪುರಸಭೆಯಲ್ಲಿ ೧೩ ಮಂದಿ ಖಾಯಂ, ಆರು ಮಂದಿ ನೇರ ಪಾವತಿಯಡಿ, ೨೦ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಮವಾರಪೇಟೆ ಪಟ್ಟಣಪಂಚಾಯ್ತಿಯಲ್ಲಿ ೧೨ಮಂದಿ ಖಾಯಂ ಹಾಗೂ ೪ಮಂದಿ ಹೊರಗುತ್ತಿಗೆ ಆಧಾರದಲ್ಲಿದ್ದಾರೆ. ಕುಶಾಲನಗರ ಪಟ್ಟಣ ಪಂಚಾಯ್ತಿಯಲ್ಲಿ ೨೪ ಮಂದಿ ಖಾಯಂ ಹಾಗೂ ೧೮ ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದಾರೆ.
ವಿಶೇಷ ನೇಮಕ ನಿಯಮಗಳು ಹಾಗೂ ಆರ್ಥಿಕ ಇಲಾಖೆ ಷರತ್ತುಗಳ ಅನ್ವಯ ಪೌರ ಕಾರ್ಮಿಕ ಸೇವೆ ಖಾಯಂ ಆಗಲಿದೆ. ಇದೀಗ ಸರಕಾರದಿಂದ ಅನುಮೋದನೆಗೊಂಡಿದ್ದು, ಆರ್ಥಿಕ ಇಲಾಖೆಯಲ್ಲಿ ಒಪ್ಪಿಗೆ ದೊರೆತ ಬಳಿಕ ಯಾರಿಗೆಲ್ಲ ಸರಕಾರಿ ಕೆಸದ ಭಾಗ್ಯ ಲಭ್ಯವಾಗಲಿದೆ ಎಂಬದು ಖಾತರಿಯಾಗುತ್ತದೆ. ದಶಕಗಳ ಕಾರ್ಮಿಕರ ಹೋರಾಟಕ್ಕೆ ಇದೀಗ ಫಲ ಸಿಕ್ಕಿದಂತಾಗಿದ್ದು, ಕಾರ್ಮಿಕರ ಮೊಗದಲ್ಲಿ ಒಂದಷ್ಟು ಮಂದಹಾಸ ಮೂಡಿದಂತಾಗಿದೆ.