* ವಿಶೇಷ ಅನುದಾನಕ್ಕೆ ಪ್ರಯತ್ನ ನಡೆಸಲು ಆಡಳಿತ ಪಕ್ಷಕ್ಕೆ ಒತ್ತಾಯ * ಪ.ಪಂ. ಸಾಮಾನ್ಯ ಸಭೆ
ಸೋಮವಾರಪೇಟೆ, ಸೆ. ೨೧: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಯಾಗುತ್ತಿದ್ದು, ಅನುದಾನದ ಕೊರತೆ ಇದೆ. ಈ ಹಿನ್ನೆಲೆ ಶಾಸಕರೊಂದಿಗೆ ಚರ್ಚಿಸಿ ವಿಶೇಷ ಅನುದಾನ ತರಲು ಪ್ರಯತ್ನಿಸಿ ಎಂದು ವಿಪಕ್ಷ ಸದಸ್ಯರುಗಳು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ಪಿ.ಕೆ. ಚಂದ್ರು ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಂದರ್ಭ ವಿಪಕ್ಷದ ಜೀವನ್ ಸೇರಿದಂತೆ ಇತರರು ಈ ಬಗ್ಗೆ ಒತ್ತಾಯಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು, ಮೂಲಭೂತ ಸೌಕರ್ಯ ಕಲ್ಪಿಸುವ ಕೆಲಸ ಆಗುತ್ತಿಲ್ಲ. ಪಂಚಾಯಿತಿಗೆ ಈವರೆಗೆ ಯಾವುದೇ ವಿಶೇಷ ಅನುದಾನಗಳು ಲಭ್ಯವಾಗಿಲ್ಲ. ನಮ್ಮ ವಾರ್ಡ್ಗಳಲ್ಲಿ ಜನರಿಗೆ ಮುಖತೋರಿಸಲೂ ಕಷ್ಟವಾಗುತ್ತಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ನಗರೋತ್ಥಾನ ಯೋಜನೆಯಡಿ ೫ ಕೋಟಿ ಅನುದಾನ ಬರುತ್ತದೆ ಎಂದು ಆಡಳಿತ ಪಕ್ಷದ ಸದಸ್ಯ ಬಿ.ಆರ್. ಮಹೇಶ್ ಹೇಳಿದರು. ೫ ಕೋಟಿ ಅನುದಾನ ಬರುತ್ತದೆ ಎಂದು ಕಳೆದ ವರ್ಷದಿಂದಲೇ ಹೇಳಲಾಗುತ್ತಿದೆ. ಈವರೆಗೆ ಅನುದಾನ ಬಂದಿಲ್ಲ. ಪಂಚಾಯಿತಿಯ ಇತರ ಅನುದಾನ ಬಳಸಿಕೊಂಡು ಕೆಲಸ ನಿರ್ವಹಿಸಲು ಖಾಯಂ ಇಂಜಿನಿಯರ್ ಇಲ್ಲ. ಅಭಿಯಂತರರು ಇಲ್ಲದೇ ಇದ್ದ ಮೇಲೆ ಸಭೆ ಯಾಕೆ ನಡೆಸ್ತೀರಾ? ಎಂದು ವಿಪಕ್ಷದ ಶೀಲಾ ಡಿಸೋಜ, ಜೀವನ್ ಗರಂ ಆದರು.
ಈಗಿನ ಅಭಿಯಂತರರು ಲೋಕೋಪಯೋಗಿ ಇಲಾಖೆಯ ವರಾಗಿದ್ದು, ಎರಡೂ ಕಡೆ ಜವಾಬ್ದಾರಿ ಇರುವುದರಿಂದ ಕೆಲಸ ಮಾಡಲು ಆಗುತ್ತಿಲ್ಲ. ಈ ಹಿನ್ನೆಲೆ ಬದಲಾವಣೆ ಮಾಡಿ ಪಂಚಾಯಿತಿಗೆ ಖಾಯಂ ಇಂಜಿನಿಯರ್ ನೇಮಕಕ್ಕೆ ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆಯುವಂತೆ ನಾಮ ನಿರ್ದೇಶಿತ ಸದಸ್ಯ ಎಸ್. ಮಹೇಶ್ ಸಲಹೆ ನೀಡಿದರು.
ಹದಗೆಟ್ಟ ಪಾರ್ಕಿಂಗ್: ಪಟ್ಟಣ ವ್ಯಾಪ್ತಿಯಲ್ಲಿ ಸಂಚಾರ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸ್ ಇಲಾಖೆ ಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬೈಕ್‌ಗಳಲ್ಲಿ ತ್ರಿಬಲ್ ರೈಡಿಂಗ್, ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ಆರೋಪ ಕೇಳಿಬಂತು.
ಬೆಳಿಗ್ಗೆ ಮತ್ತು ಸಂಜೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಬರುವ ಸಮಯದಲ್ಲಿ ಬೈಕ್‌ನಲ್ಲಿ ಅತಿವೇಗ ಮತ್ತು ಕರ್ಕಶ ಶಬ್ದದೊಂದಿಗೆ ಸಾಗುವುದು, ತ್ರಿಬಲ್ ರೈಡಿಂಗ್ ಮಾಡುವುದು ಮಾಮೂಲಾಗಿದ್ದು, ಪಾದಚಾರಿಗಳು ಭಯದಿಂದ ತೆರಳಬೇಕಿದೆ. ಇಂತಹ ಅವ್ಯವಸ್ಥೆಯಿದ್ದರೂ ಪೊಲೀಸ್ ಇಲಾಖೆ ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.
ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ಹಾರಂಗಿ ನೀರು ಯೋಜನೆಗೆ ವಾರ್ಷಿಕ ೯೫ ಲಕ್ಷ ವ್ಯಯಿಸಲಾಗುತ್ತಿದೆ. ಆದರೆ ದಿನವೊಂದಕ್ಕೆ ೧ ಸಾವಿರ ಲೀಟರ್ ಸಹ ನೀರು ಬರುತ್ತಿಲ್ಲ. ಈ ಯೋಜನೆ ನಿಷ್ಪçಯೋಜಕವಾಗಿದೆ. ದುದ್ದುಗಲ್ಲು ಹೊಳೆಯಲ್ಲಿ ಸಾಕಷ್ಟು ನೀರಿದ್ದು, ಇದನ್ನು ಬಳಸಿಕೊಳ್ಳಬೇಕೆಂದು ಉಪಾಧ್ಯಕ್ಷ ಸಂಜೀವ ಸಲಹೆ ನೀಡಿದರು.
ಕಳೆದ ೧೪ ವರ್ಷದಿಂದ ಒಂದೇ ಮೋಟಾರ್ ಇರುವುದರಿಂದ ಆಗಾಗ್ಗೆ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ. ಎರಡೂ ಘಟಕಗಳಿಂದ ಪಟ್ಟಣಕ್ಕೆ ಕುಸಿಯುವ ನೀರು ಸರಬರಾಜಾಗುತ್ತಿದೆ. ಇದೀಗ ನೂತನವಾಗಿ ೧೦೦ ಹೆಚ್.ಪಿ. ಸಾಮರ್ಥ್ಯದ ೨ ಮೋಟಾರ್‌ಗಳನ್ನು ಖರೀದಿಸಲು ಕ್ರಮ ವಹಿಸಲಾಗಿದೆ ಎಂದು ಅಧ್ಯಕ್ಷ ಪಿ.ಕೆ. ಚಂದ್ರು ಮತ್ತು ಆರೋಗ್ಯ ನಿರೀಕ್ಷಕ ಜಾಸಿಂ ಖಾನ್ ತಿಳಿಸಿದರು.
ವಿದ್ಯುತ್ ಬಿಲ್ ಮಾತ್ರ ಪಂಚಾಯಿತಿಯಿAದ ಪಾವತಿ ಯಾಗುತ್ತಿದ್ದು, ಘಟಕದಿಂದ ನೀರು ಸರಬರಾಜು ಆಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆಯಿಂದಾಗಿ ವಾರ್ಡ್ ನಿವಾಸಿಗಳಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ಎಂದು ಸಂಜೀವ ಆಕ್ರೋಶ ವ್ಯಕ್ತಪಡಿಸಿದರು.
‘ಜನತಾ ಕಾಲೋನಿ ವಾರ್ಡ್ನಲ್ಲಿ ಕುಡಿಯುವ ನೀರು ಮತ್ತು ತ್ಯಾಜ್ಯ ಸಮಸ್ಯೆ ಹೆಚ್ಚಾಗಿದೆ. ಅಂಗನವಾಡಿ ಬಳಿ ಕಸದ ರಾಶಿ ನಿರ್ಮಾಣವಾಗಿದೆ. ಮಳೆ ನಿಂತು ಬಿಸಿಲು ಬಂದರೆ ಹಾವು, ಕ್ರಿಮಿಕೀಟ ಮನೆಯೊಳಗೆ ಬರುತ್ತಿವೆ. ವಾರ್ಡ್ನಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಸಾರ್ವಜನಿಕರು ಸದಸ್ಯರಿಗೆ ಬಾಯಿಗೆ ಬಂದAತೆ ಬೈಯುತ್ತಿದ್ದಾರೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ವಾರ್ಡ್ ಸದಸ್ಯ ಶುಭಕರ್ ಆಗ್ರಹಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಬೀಡಾಡಿ ಜಾನುವಾರುಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಮಕ್ಕಳು, ಸಾರ್ವಜನಿಕರು ಓಡಾಡಲು ಕಷ್ಟವಾಗುತ್ತಿದೆ. ದ್ವಿಚಕ್ರ ವಾಹನಗಳು ಅವಘಡಕ್ಕೀಡಾಗುತ್ತಿವೆ. ಇಂತಹ ಜಾನುವಾರುಗಳನ್ನು ಗೋಶಾಲೆಗೆ ಸಾಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರುಗಳಾದ ಶೀಲಾ ಡಿಸೋಜ, ಮೃತ್ಯುಂಜಯ, ಸೋಮೇಶ್, ಮಹೇಶ್ ಸೇರಿದಂತೆ ಇತರರು ಅಧಿಕಾರಿಯನ್ನು ಒತ್ತಾಯಿಸಿದರು.
ಮಾರ್ಕೆಟ್ ಏರಿಯಾ ತೆರವಿಗೆ ಸಂಬAಧಿಸಿದAತೆ ಪಟ್ಟಣ ಪಂಚಾಯಿತಿ ಯಿಂದ ಕ್ರಮವಹಿಸಲಾಗಿತ್ತು. ಆದರೆ ಕೆಲವರು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದಕ್ಕೆ ಸಂಬAಧಿಸಿದAತೆ ಪಂಚಾಯಿತಿ ವತಿಯಿಂದಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ಸಭೆಯಲ್ಲಿ ಹೇಳಿದರು.
ಸರ್ಕಾರಿ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಪಂಚಾಯಿತಿಗೆ ಸೇರಿದ ೭ ಸೆಂಟ್ ನಿವೇಶನವಿತ್ತು. ಇದರಲ್ಲಿ ೪.೭೫ ಸೆಂಟ್ ಜಾಗ ರಸ್ತೆಗೆ ಬಳಕೆಯಾಗಿದೆ. ಉಳಿಕೆಯಿದ್ದ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಒತ್ತುವರಿ ಮಾಡಿಕೊಂಡಿದ್ದು, ಕೋರ್ಟ್ ಆದೇಶದ ಹಿನ್ನೆಲೆ ಅದನ್ನು ತೆರವುಗೊಳಿಸಿ ಪಂಚಾಯಿತಿ ವಶಕ್ಕೆ ಪಡೆಯಲಾಗಿದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.
ಹೊಸ ಬಡಾವಣೆಯಲ್ಲಿ ಕೆಲವೊಂದು ನಿವೇಶನಕ್ಕೆ ನಕಲಿ ಹಕ್ಕುಪತ್ರ ಪಡೆಯಲಾಗಿರುವ ಶಂಕೆಯಿದ್ದು, ಇದನ್ನು ಪರಿಶೀಲಿಸಬೇಕೆಂದು ಎಸ್. ಮಹೇಶ್ ಹೇಳಿದರು. ಕೆಲವೊಂದು ನಿವೇಶನಗಳು ಪರಭಾರೆಯಾಗಿದ್ದು, ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕೆಂದು ಶೀಲಾ ಡಿಸೋಜ ಆಗ್ರಹಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಅಳವಡಿಕೆಗೆ ೯ ಲಕ್ಷ ಅನುದಾನ ನಿಗದಿ ಪಡಿಸಿರುವ ವಿಷಯಕ್ಕೆ ಸಂಬAಧಿಸಿದAತೆ ಸದಸ್ಯರುಗಳ ನಡುವೆ ತೀವ್ರ ಚರ್ಚೆ ನಡೆಯಿತು. ಅಂತಿಮವಾಗಿ ಶೇ.೪೦ರಷ್ಟು ‘ಬಿಲೋ’ ಹಾಕಿರುವುದರಿಂದ ಟೆಂಡರ್ ತಡೆಹಿಡಿಯುವ ಬಗ್ಗೆ ತೀರ್ಮಾನಿಸಲಾಯಿತು.
ಪಂಚಾಯಿತಿಗೆ ಕಳೆದ ೪ ತಿಂಗಳ ಹಿಂದೆ ದಫೇದಾರ್ ಹುದ್ದೆ ನೇಮಕ ಗೊಂಡಿದ್ದು, ಈವರೆಗೆ ಅವರು ಕರ್ತವ್ಯಕ್ಕೆ ಹಾಜರಾಗಿಲ್ಲ. ಕುಶಾಲನಗರ ದಲ್ಲಿ ಕೆಲಸ ಮಾಡುತ್ತಿದ್ದು, ಇಲ್ಲಿಂದ ವೇತನ ನೀಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಬದಲಿ ವ್ಯವಸ್ಥೆಗೆ ಕ್ರಮವಹಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಸೇರಿದಂತೆ ಸದಸ್ಯರುಗಳು, ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.