ಮಡಿಕೇರಿ, ಸೆ. ೨೧: ಮಡಿಕೇರಿ ದಸರಾ ಅಂಗವಾಗಿ ಕ್ರೀಡಾ ಸಮಿತಿ ವತಿಯಿಂದ ವಿವಿಧ ಕ್ರೀಡಾಕೂಟಗಳು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಸಮಿತಿ ಕಾರ್ಯದರ್ಶಿ ಕಪಿಲ್ ದುಗ್ಗಳ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೨೮ ರಂದು ೧ ರಿಂದ ೪, ೫ ರಿಂದ ೭, ೮ ರಿಂದ ೧೦ನೇ ತರಗತಿ, ಪಿಯುಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ವಿಭಾಗಗಳಿಗೆ ೧೦೦ ಮೀಟರ್ ಹಾಗೂ ೪೦೦ ಮೀಟರ್ ಓಟದ ಸ್ಪರ್ಧೆ, ೧೬೦೦ ಮೀಟರ್ ಮುಕ್ತ ಓಟದ ಸ್ಪರ್ಧೆ, ೧ ರಿಂದ ೩ ಹಾಗೂ ೪ ರಿಂದ ೬ ವರ್ಷ ವಯೋಮಾನದವರಿಗೆ ಕಾಳು ಹೆಕ್ಕುವುದು, ಮುಕ್ತ ಭಾರದ ಗುಂಡು ಹಾಗೂ ಹಗ್ಗಜಗ್ಗಾಟ, ನಿಧಾನ ದ್ವಿಚಕ್ರ ವಾಹನ ಚಾಲನೆ, ಮಡಿಕೇರಿ ತಾಲೂಕು ಮಟ್ಟದ ಪುರುಷರ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್, ಪುರುಷರ ಬಾಸ್ಕೆಟ್ ಬಾಲ್, ೧೫ ವರ್ಷದೊಳಗೆ ಹಾಗೂ ಮುಕ್ತ ಪುರುಷ ಹಾಗೂ ಮಹಿಳೆಯರಿಗೆ ಬ್ಯಾಡ್‌ಮಿಂಟನ್ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ತಾ. ೨೯ ರಂದು ದಸರಾ ಕ್ರೀಡಾ ಸಮಿತಿ, ಮಡಿಕೇರಿ ದಸರಾ ಸಮಿತಿ, ಪತ್ರಿಕಾ ಮಾಧ್ಯಮ, ಪೊಲೀಸ್, ಶಿಕ್ಷಕರು, ವಕೀಲರು, ವೈದ್ಯಕೀಯ, ಜಿಲ್ಲಾ ಪಂಚಾಯ್ತಿ ಸಿಬ್ಬಂದಿಗಳ ನಡುವೆ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಇದಕ್ಕೂ ಮುನ್ನ ಬೆಳಿಗ್ಗೆ ಪುರುಷರಿಗೆ ಜನರಲ್ ತಿಮ್ಮಯ್ಯ ವೃತ್ತದಿಂದ ಕ್ಯಾಪಿಟಲ್ ವಿಲೇಜ್ ತನಕ, ಮಹಿಳೆಯರಿಗೆ ಜನರಲ್ ತಿಮ್ಮಯ್ಯ ವೃತ್ತದಿಂದ ನೀರುಕೊಲ್ಲಿ ತನಕ ಮ್ಯಾರಥಾನ್ ನಡೆಯಲಿದೆ ಎಂದು ವಿವರಿಸಿದರು.

ತಾ. ೨ ರಂದು ಸಾರ್ವಜನಿಕ ಮುಕ್ತ ವಿಭಾಗದಲ್ಲಿ ಪುರುಷರ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಪ್ರವೇಶ ಶುಲ್ಕ ನೀಡಿ ಕ್ರೀಡಾಕೂಟದಂದು ನೋಂದಾಯಿಸಿಕೊಳ್ಳಬಹುದು. ಇತರ ಕ್ರೀಡಾಕೂಟಗಳಿಗೆ ಭಾಗವಹಿಸಲು ಇಚ್ಚಿಸುವವರು ಕ್ರೀಡಾಕೂಟದ ದಿನದಂದು ಹೆಸರು ನೋಂದಾಯಿಸಿಕೊAಡು ಸ್ಪರ್ಧಿಸಬಹುದಾಗಿದೆ ಎಂದರು.

ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ರಾಜೀವ್ ಕುಮಾರ್, ಉಪಾಧ್ಯಕ್ಷ ನಯನ್, ಗೌರವ ಸಲಹೆಗಾರ ಕೃಷ್ಣ, ಸದಸ್ಯರಾದ ನಿರಂಜನ್, ನಿತಿನ್ ಹಾಜರಿದ್ದರು.