ಸೌರ ಮಂಡಲದಲ್ಲೇ ಅತ್ಯಂತ ದೊಡ್ಡ ಗ್ರಹ ಎನಿಸಿಕೊಂಡಿರುವ ಗುರು ಗ್ರಹ (ಎuಠಿiಣeಡಿ) ತಾ. ೨೬ ರಂದು ಸುಮಾರು ೫೯ ವರ್ಷಗಳ ಬಳಿಕ ಭೂಮಿಗೆ ಅತ್ಯಂತ ಸಮೀಪದಲ್ಲಿ ಗೋಚರಿಸಲಿದೆ. ಗುರು ಗ್ರಹವು ಪ್ರತಿ ೧೩ ತಿಂಗಳಿಗೊಮ್ಮೆ ‘ಅಪೋಸಿಷನ್’ಗೆ ಬರುತ್ತದೆ. ಗುರು ‘ಅಪೋಸಿಷನ್’ನಲ್ಲಿದೆ ಎಂದರೆ ಭೂಮಿಯ ತದ್ವಿರುದ್ಧ ದಿಕ್ಕುಗಳಲ್ಲಿ ಸೂರ್ಯ ಹಾಗೂ ಗುರು ಗ್ರಹ ಇದೆ ಎಂದರ್ಥ. ಇಂತಹ ಸಂದರ್ಭದಲ್ಲಿ ಸೂರ್ಯ ಪಶ್ಚಿಮದಲ್ಲಿ ಅಸ್ತವಾಗುವ ಕ್ಷಣದಲ್ಲೇ ಪೂರ್ವದಿಂದ ಗುರು ಉದಯವಾಗುತ್ತೆ. ಈ ಸಂದರ್ಭ ಅತ್ಯಂತ ಪ್ರಕಾಶಯುತವಾಗಿ ಗುರು ಹೊಳೆಯಲಿದೆ. ಇದು ೧೩ ತಿಂಗಳುಗಳಿಗೊಮ್ಮೆ ಸಂಭವಿಸಿದರೂ ಈ ಬಾರಿ ಈ ‘ಅಪೋಸಿಷನ್’ ನಡೆಯುವಾಗ ಗುರು ೧೯೬೩ ಇಸವಿಯ ಬಳಿಕ ಇದೇ ಮೊದಲ ಬಾರಿಗೆ ಭೂಮಿಯ ಅತ್ಯಂತ ಹತ್ತಿರ ಬರಲಿರುವುದರಿಂದ (ಸುಮಾರು ೫೯ ಕೋಟಿ ಕಿ.ಮೀ) ಮೋಡ ರಹಿತ ಆಕಾಶವಿದ್ದಲ್ಲಿ ಪ್ರಕಾಶಿಸಲಿದೆ. ಕೆಲವು ದಿನಗಳಿಂದಲೇ ಗುರು ಗ್ರಹ ರಾತ್ರಿ ಆಕಾಶದಲ್ಲಿ ಕಂಗೊಳಿಸುತ್ತಿದ್ದು, ತಾ.೨೬ ರಂದು ಅತ್ಯಂತ ಪ್ರಕಾಶಯುತವಾಗಿ ಕಾಣಲಿದೆ.
ಸೂರ್ಯಾಸ್ತದ ಬಳಿಕ ಪೂರ್ವ ದಿಕ್ಕಿನೆಡೆಗೆ ನೋಡಿದರೆ ಗುರುವನ್ನು ಗ್ರಹಿಸಬಹುದು. ಕೊಡಗು ಬೆಟ್ಟ-ಗುಡ್ಡ ಪ್ರದೇಶವಾಗಿರುವ ಕಾರಣ ಸಂಜೆ ೭ ಗಂಟೆಯ ನಂತರ ಸುಲಭವಾಗಿ ಗೋಚರಿಸಲಿದೆ. ಟೆಲಿಸ್ಕೋಪ್ ಬಳಸಿದಲ್ಲಿ ಗುರುವಿನ ಕನಿಷ್ಟ ೪ ಉಪಗ್ರಹಗಳೂ ಕಾಣಸಿಗಲಿವೆ.
- ಪ್ರಜ್ವಲ್