*ಸಿದ್ದಾಪುರ, ಸೆ. ೨೧: ನೆಲ್ಲಿಹುದಿಕೇರಿ ಬೆಟ್ಟದಕಾಡು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಸ್ಥಳೀಯ ಕೃಷಿಕ ಎಂ.ಎಲ್. ರಮೇಶ ಎಂಬವರ ಗದ್ದೆ ಹಾಗೂ ಅಡಿಕೆ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಅಪಾರ ನಷ್ಟ ಉಂಟು ಮಾಡಿದೆ. ಗದ್ದೆ ಸಂಪೂರ್ಣವಾಗಿ ನಾಶವಾಗಿದ್ದು, ಸುಮಾರು ೪- ೫ ವರ್ಷದ ೧೦೦ಕ್ಕೂ ಅಧಿಕ ಅಡಿಕೆ ಸಸಿ ಮತ್ತು ಮರಗಳನ್ನು ಮುರಿದು ಹಾಕಿದೆ. ನಿರಂತರ ಕಾಡಾನೆ ದಾಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ರಮೇಶ, ಅರಣ್ಯ ಇಲಾಖೆ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದರು. ಗದ್ದೆ ಮತ್ತು ಅಡಿಕೆ ತೋಟ ನಾಶವಾಗಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.