ಸೋಮವಾರಪೇಟೆ, ಸೆ.೨೧: ತಾಲೂಕಿನ ಶನಿವಾರಸಂತೆ ಪಟ್ಟಣದಲ್ಲಿ ಕರ್ನಾಟಕ ಪ್ರೆöÊವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಮೇರೆ ಮೂರು ಖಾಸಗಿ ಕ್ಲಿನಿಕ್‌ಗಳಿಗೆ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಬೀಗ ಜಡಿಯಲಾಯಿತು.

ನೂತನವಾಗಿ ಕ್ಲಿನಿಕ್‌ಗಳನ್ನು ತೆರೆಯುವವರು ಕಡ್ಡಾಯವಾಗಿ ಕರ್ನಾಟಕ ಪ್ರೆöÊವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯಡಿ ನೋಂದಣಿ ಮಾಡಿಕೊಂಡು ಜಿಲ್ಲಾಧಿಕಾರಿಗಳಿಂದ ನೋಂದಾವಣೆ ಪತ್ರ ಪಡೆಯಬೇಕಿದ್ದು, ಇದನ್ನು ಉಲ್ಲಂಘಿಸಿ ಕ್ಲಿನಿಕ್‌ಗಳನ್ನು ತೆರೆಯಲಾಗಿತ್ತು.

ಶನಿವಾರಸಂತೆಗೆ ಪರಿಶೀಲನಾ ಭೇಟಿ ನೀಡಿದ ಸಂದರ್ಭ ಈ ಬಗ್ಗೆ ಗಮನಕ್ಕೆ ಬಂದಿದ್ದು, ಕಾನೂನು ಪ್ರಕಾರ ಶನಿವಾರಸಂತೆ ಪಟ್ಟಣದಲ್ಲಿರುವ ಬಸಗುಳ ಡೆಂಟಲ್ ಕ್ಲಿನಿಕ್, ಮಂಜುನಾಥ ಮತ್ತು ಅನ್ನಪೂರ್ಣ ಕ್ಲಿನಿಕ್‌ಗಳಿಗೆ ಬೀಗ ಹಾಕಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ತಾಲೂಕು ತಹಶೀಲ್ದಾರ್ ನರಗುಂದ್ ಅವರ ಸಮಕ್ಷಮ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭ ನೋಂದಾವಣೆ ಪತ್ರವನ್ನು ಹಾಜರುಪಡಿಸಲು ಸಂಬAಧಿಸಿದ ಕ್ಲಿನಿಕ್ ಮಾಲೀಕರು ವಿಫಲರಾಗಿದ್ದಾರೆ.

ಈ ಹಿನ್ನೆಲೆ ನೋಂದಾವಣಾ ಪತ್ರ ಸಿಗುವವರೆಗೂ ಕ್ಲಿನಿಕ್‌ಗಳನ್ನು ತೆರೆಯದಂತೆ ನಿರ್ದೇಶಿಸಿ ಬೀಗ ಜಡಿಯಲಾಗಿದೆ ಎಂದು ಡಾ. ಶ್ರೀನಿವಾಸ್ ತಿಳಿಸಿದ್ದಾರೆ.

ಈ ಸಂದರ್ಭ ಕಂದಾಯ ಇಲಾಖೆಯ ಅಧಿಕಾರಿಗಳು, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಹೇಶ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.