ಕುಶಾಲನಗರ, ಸೆ.೨೧: ಕೊಪ್ಪ ಗ್ರಾಮ ಪಂಚಾಯಿತಿ ನೂತನ ವಾಣಿಜ್ಯ ಮಳಿಗೆಯಲ್ಲಿ ಮಾಂಸ ಮಾರುಕಟ್ಟೆ ಟೆಂಡರ್ ಕರೆಯುವ ಪ್ರಕ್ರಿಯೆ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೇರಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ.
ಜನವಸತಿ ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆ ಎದುರುಗಡೆ ಹಾಗೂ ಹೆದ್ದಾರಿ ರಸ್ತೆ ಬದಿಯಲ್ಲಿ ಕೊಪ್ಪ ಗ್ರಾಮ ಪಂಚಾಯಿತಿ ಮೂಲಕ ನಿರ್ಮಿಸಿರುವ ವಾಣಿಜ್ಯ ಮಳಿಗೆಯಲ್ಲಿ ಮಾಂಸ ಮಾರುಕಟ್ಟೆಗೆ ಅವಕಾಶ ಕಲ್ಪಿಸದಂತೆ ತಡೆÀ ಕೋರಿ ಸ್ಥಳೀಯ ನಿವಾಸಿಗಳಾದ ಚಂದ್ರಮೋಹನ್ ಮತ್ತಿತರರು ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ಬುಧವಾರ ನ್ಯಾಯಾಲಯ ಕೈಗೆತ್ತಿಕೊಂಡಿದ್ದು, ಸರ್ಕಾರ ಮತ್ತು ಪೌರಾಡಳಿತ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಉಚ್ಚ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ೨೨ ರಂದು ನಡೆಯಲಿರುವ ಮಾಂಸ ಮಾರುಕಟ್ಟೆ ಟೆಂಡರ್ ಪ್ರಕ್ರಿಯೆ ನಡೆಸುವಂತೆ ನ್ಯಾಯಾಲಯದಿಂದ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಎನ್.ಪಿ ಅಮೃತೇಶ್ ತಿಳಿಸಿದ್ದಾರೆ.
ಕೊಪ್ಪ ಗ್ರಾಮದ ಮಾಂಸ ಮಾರಾಟಗಾರರ ಸಂಘದ ಪ್ರಮುಖರು ಸೆಪ್ಟಂಬರ್ ೨೨ ರಂದು ನಡೆಯಲಿರುವ ಮಾಂಸ ಮಾರುಕಟ್ಟೆ ಹರಾಜು ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದು, ಸ್ವಚ್ಚತೆಗೆ ಆದ್ಯತೆ ನೀಡದೆ, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡದೆ ಮಾಂಸ ಮಾರುಕಟ್ಟೆಗೆ ಟೆಂಡರ್ ಕರೆಯುವುದು ಸೂಕ್ತವಲ್ಲ ಎಂದು ಪಂಚಾಯಿತಿ ಅಧ್ಯಕ್ಷರಾದ ರೇಣುಕ ಸ್ವಾಮಿ ಮತ್ತು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣ್, ರಾಜಪ್ಪ, ಪ್ರಮುಖರಾದ ಕೆ.ಸಿ.ಪಿ ಮೋಹನ್, ಮೀರಾ ಮೊಹಿದ್ದೀನ್, ಬಷೀರ್ ಅಹಮ್ಮದ್, ಅಬ್ದುಲ್ ಖಾದರ್, ಗಿರೀಶ್ ಮತ್ತಿತರರು ಮಾತನಾಡಿ ಟೆಂಡರ್ ಪ್ರಕ್ರಿಯೆಯನ್ನು ಮುಂದಿನ ಮಾರ್ಚ್ ತನಕ ಮುಂದೂಡುವAತೆ ಒತ್ತಾಯಿಸಿದ್ದಾರೆ.