ಸೋಮವಾರಪೇಟೆ, ಸೆ.೨೧: ಇಲ್ಲಿನ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ, ಮುಖ್ಯಾಧಿಕಾರಿ ಮತ್ತು ಅಧಿಕಾರಿ ವರ್ಗವು ಪಂಚಾಯಿತಿ ಸಿಬ್ಬಂದಿಗಳ ಮೇಲಿನ ಹಿಡಿತ ಕಡಿದುಕೊಂಡಿರುವುದಕ್ಕೆ ಕೈಗನ್ನಡಿಯಾಗಿರುವ ಪ್ರಕರಣವೊಂದು ಇಂದಿನ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.
ಪಂಚಾಯಿತಿ ವ್ಯಾಪ್ತಿಯ ವಾರ್ಡ್ಗಳಲ್ಲಿ ಉತ್ಪತ್ತಿಯಾಗುವ ಮತ್ತು ಪಟ್ಟಣದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಬಳಕೆಯಾಗಬೇಕಿದ್ದ ಸರ್ಕಾರಿ ವಾಹನವು, ದೂರದ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ರೆಸಾರ್ಟ್ವೊಂದರ ತ್ಯಾಜ್ಯ ಸಾಗಾಟಕ್ಕೆ ಬಳಕೆಯಾಗುತ್ತಿದ್ದರೂ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು, ಮುಖ್ಯಾಧಿಕಾರಿ ಹಾಗೂ ಆರೋಗ್ಯ ನಿರೀಕ್ಷಕರ ಗಮನಕ್ಕೆ ಬಂದಿಲ್ಲ!
ಕಳೆದ ಮರ‍್ನಾಲ್ಕು ತಿಂಗಳುಗಳಿAದ ಪ್ರತಿ ವಾರದ ಎರಡು ದಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಲ್ಲಳ್ಳಿ ಸಮೀಪದ ಪ್ರತಿಷ್ಠಿತ ‘ಆಯತಾ..’ ರೆಸಾರ್ಟ್ನಿಂದ ಕ್ಯಾಂಟರ್ ವಾಹನದಲ್ಲಿ ಬರುವ ತ್ಯಾಜ್ಯವನ್ನು ಪಟ್ಟಣ ಪಂಚಾಯಿತಿ ಕಚೇರಿ ಸಮುಚ್ಚಯ ಇರುವ ಸಂಕೀರ್ಣದೊಳಗೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ಲೋಡ್ ಮಾಡಿ ನಂತರ ಇಲ್ಲಿಂದ ಬೇರೆಡೆಗೆ ಸಾಗಾಟ ಮಾಡಲಾಗುತ್ತಿದ್ದರೂ ಆಡಳಿತ ಮಂಡಳಿಯ ಗಮನಕ್ಕೆ ಬಾರದಿರುವುದು ಸೋಜಿಗವೇ ಸರಿ!
ಈ ಬಗ್ಗೆ ಇಂದಿನ ಸಭೆಯಲ್ಲಿ ದಾಖಲೆ ಸಹಿತ ವಿಷಯ ಪ್ರಸ್ತಾಪವಾದ ಸಂದರ್ಭ ಅಧ್ಯಕ್ಷರು ಸೇರಿದಂತೆ ಅಧಿಕಾರಿ ವರ್ಗದ ಕಾರ್ಯವೈಖರಿಯ ಬಗ್ಗೆ ತಿಳಿಯುವಂತಾಯಿತು. ಪಟ್ಟಣ ಪಂಚಾಯಿತಿಗೆ ಸರ್ಕಾರ ನೀಡಿದ ಅನುದಾನದಲ್ಲಿ ಖರೀದಿಸಿರುವ ವಾಹನಗಳನ್ನು ಪಟ್ಟಣ ವ್ಯಾಪ್ತಿಯಲ್ಲಿನ ತ್ಯಾಜ್ಯ ವಿಲೇವಾರಿಗೆ ಬಳಕೆ ಮಾಡಲಾಗುತ್ತಿದ್ದು, ಇದರ ಮಧ್ಯೆ ೨೫ ಕಿ.ಮೀ. ದೂರವಿರುವ ರೆಸಾರ್ಟ್ವೊಂದರ ತ್ಯಾಜ್ಯವನ್ನು ವಿಲೇವಾರಿ ಮಾಡಲು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಪಟ್ಟಣ ಪಂಚಾಯಿತಿ ಕಚೇರಿ ಸಮುಚ್ಚಯದ ಆವರಣದೊಳಗೆ ರೆಸಾರ್ಟ್ ತ್ಯಾಜ್ಯವನ್ನು ಪ.ಪಂ. ವಾಹನಕ್ಕೆ ತುಂಬಿಸುತ್ತಿದ್ದ ಸಂದರ್ಭ ತೆಗೆದ ಫೋಟೋವನ್ನು ಇಂದಿನ ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯ ಶರತ್‌ಚಂದ್ರ ಅವರು ಪ್ರದರ್ಶಿಸಿ ಈ ಬಗ್ಗೆ ಅಧಿಕಾರಿಗಳ ಬಳಿ ಸಮಜಾಯಿಷಿಕೆ ಕೇಳಿದರು.
ಇದಕ್ಕೆ ನಿರುತ್ತರರಾದ ಅಧಿಕಾರಿಗಳು, ಇಂತಹ ಘಟನೆ ನಮ್ಮ ಗಮನಕ್ಕೆ ಬಂದೇ ಇಲ್ಲ ಎಂದರು. ಅಧ್ಯಕ್ಷರೂ ಸಹ ಇದೇ ಉತ್ತರ ನೀಡಿದರು. ಪಟ್ಟಣದ ತ್ಯಾಜ್ಯ ವಿಲೇವಾರಿ ಸಮಸ್ಯೆ ಇಂದಿಗೂ ಕಗ್ಗಂಟಾಗಿಯೇ ಇದೆ. ಸಿದ್ದಲಿಂಗಪುರ ದಲ್ಲಿ ಜಾಗ ಇದ್ದರೂ ಕಸ ವಿಲೇವಾರಿಗೆ ಇನ್ನೂ ಕ್ರಮ ಕೈಗೊಂಡಿಲ್ಲ.
ಈ ನಡುವೆ ಪಟ್ಟಣ ಶುಚಿತ್ವದ ಮೇಲಿನ ಕಾಳಜಿಯಿಂದ ಸಹಕಾರಿ ಕ್ಷೇತ್ರದ ಧುರೀಣರೋರ್ವರು ತಮಗೆ ಸೇರಿದ ಜಾಗದಲ್ಲಿ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ಉದಾರ ಮನಸ್ಸಿನಿಂದ ಜಾಗ ನೀಡಿದ್ದಾರೆ.
ಇದನ್ನು ದುರುಪಯೋಗಪಡಿಸಿ ಕೊಂಡಿರುವ ತ್ಯಾಜ್ಯ ವಿಲೇವಾರಿ ವಾಹನದ ಚಾಲಕ, ರೆಸಾರ್ಟ್ನೊಂದಿಗೆ ಶಾಮೀಲಾಗಿ ಹೊರ ಜಿಲ್ಲೆ, ರಾಜ್ಯ, ದೇಶದಿಂದ ಬರುವ ಪ್ರವಾಸಿಗರಿಂದ ಉತ್ಪತ್ತಿಯಾ ಗುವ ತ್ಯಾಜ್ಯವನ್ನು ಸಂಗ್ರಹಿಸಿಕೊAಡು, ಪಂಚಾಯಿತಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾನೆ ಎಂದು ಸದಸ್ಯರುಗಳು ಆರೋಪಿಸಿದರು.
ಪಂಚಾಯಿತಿಗೆ ಸೇರಿದ ತ್ಯಾಜ್ಯ ವಿಲೇವಾರಿ ವಾಹನವನ್ನು ಮೂವರು ಚಾಲಕರು ನಿರ್ವಹಿಸುತ್ತಿದ್ದು, ರೆಸಾರ್ಟ್ನ ತ್ಯಾಜ್ಯವನ್ನು ಪಂಚಾಯಿತಿ ವಾಹನದಲ್ಲಿ ಸಾಗಿಸುತ್ತಿರುವ ಚಾಲಕನನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಸದಸ್ಯರುಗಳು ಅಧ್ಯಕ್ಷ ಪಿ.ಕೆ. ಚಂದ್ರು ಮತ್ತು ಮುಖ್ಯಾಧಿಕಾರಿ ನಾಚಪ್ಪ ಅವರನ್ನು ಆಗ್ರಹಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ಸಂದರ್ಭ ಸಾರ್ವಜನಿಕ ರೊಂದಿಗೆ ಉಡಾಫೆಯಿಂದ ವರ್ತಿಸುವುದು, ತಮಗೆ ಬೇಕಾದ ಸ್ಥಳಗಳಲ್ಲಿ ವಾಹನ ನಿಲ್ಲಿಸಿ ‘ಕಸವನ್ನು ಇಲ್ಲಿಗೇ ತಂದು ಹಾಕಿ’ ಎಂದು ಆದೇಶಿಸುವುದು, ನಿಯಮಿತವಾಗಿ ತ್ಯಾಜ್ಯ ಸಂಗ್ರಹಣೆಗೆ ಬಾರದೇ ಇರುವ ಚಾಲಕ, ರೆಸಾರ್ಟ್ನ ತ್ಯಾಜ್ಯವನ್ನು ಮಾತ್ರ ಸರ್ಕಾರಿ ಆದೇಶದಂತೆ ಪಾಲಿಸುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದ ಸದಸ್ಯರು, ಈ ಬಗ್ಗೆ ಸಭೆಗೆ ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು.
ಜಾಗದ ಮಾಲೀಕರೇ ಕಸವನ್ನು ಹಾಕಲು ಹೇಳಿರುವ ಬಗ್ಗೆ ಕಳೆದ ೪ ದಿನಗಳ ಹಿಂದಷ್ಟೇ ತನಗೆ ಮಾಹಿತಿ ಸಿಕ್ಕಿದೆ ಎಂದು ಆರೋಗ್ಯ ನಿರೀಕ್ಷಕ ಜಾಸಿಂ ಖಾನ್ ಹೇಳಿದರು. ಈ ಸಂದರ್ಭ ಸಭೆಯಿಂದಲೇ ಜಾಗದ ಮಾಲೀಕರಿಗೆ ಕರೆ ಮಾಡಿದ ಸದಸ್ಯರೋರ್ವರು ಲೌಡ್ ಸ್ಪೀಕರ್ ಹಾಕಿ ಈ ಬಗ್ಗೆ ವಿವರ ಕೇಳಿದರು.
ಜಾಗದ ಮಾಲೀಕರು ಉತ್ತರಿಸಿ, ‘ಪಂಚಾಯಿತಿ ಶುಚಿಯಾಗಿರಲಿ ಎಂಬ ಸದುದ್ದೇಶದಿಂದ ತನಗೆ ಸೇರಿದ ಜಾಗದಲ್ಲಿ ಕಸ ವಿಲೇವಾರಿಗೆ ಅವಕಾಶ ನೀಡಿದ್ದೇನೆ. ರೆಸಾರ್ಟ್ನ ತ್ಯಾಜ್ಯ ತಂದು ಸುರಿಯುವಂತೆ ಯಾರಿಗೂ ಹೇಳಿಲ್ಲ. ನಾವೇನೋ ಒಳ್ಳೇದು ಮಾಡೋಕೆ ಬಂದ್ರೆ ಹೀಗಾ ಮಾಡೋದು?’ ಎಂದು ಮರು ಪ್ರಶ್ನಿಸಿದರು.
ಈ ಬಗ್ಗೆ ಕೆಲಕಾಲ ಚರ್ಚೆ ನಡೆದು ವಾಹನ ಚಾಲಕರನ್ನು ಕರೆದು ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗು ವುದು ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.