ಪೊನ್ನಂಪೇಟೆ, ಸೆ. ೨೧: ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನ ಸಹಕಾರ ಸಂಘವು ೨೦೨೧-೨೨ನೇ ಸಾಲಿನಲ್ಲಿ ರೂ.೮೮.೩೫ ಕೋಟಿಗಳ ವಾರ್ಷಿಕ ವಹಿವಾಟು ನಡೆಸಿದ್ದು, ರೂ. ೬೯.೬೫ ಲಕ್ಷ ಕ್ರೂಢೀಕೃತ ವ್ಯಾಪಾರ ಲಾಭ ಹಾಗೂ ರೂ.೨೪.೮೩ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಮುದ್ದಿಯಡ ಡಿ. ಮಂಜು ಗಣಪತಿ ಮಾಹಿತಿ ನೀಡಿದ್ದಾರೆ.
ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ೩೦೩೯ ಸದಸ್ಯರುಗಳ ವಾರ್ಷಿಕ ವಹಿವಾಟಿನಿಂದ ಸಂಘವು ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿ ರುವುದರಿಂದ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಸಂಘದ ಸದಸ್ಯರಿಗೆ ಈ ಬಾರಿ ಶೇ.೧೫ ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದರು.
ಸದಸ್ಯರ ಪಾಲು ಹಣ ರೂ೯೭.೪೮ ಲಕ್ಷ, ಸಂಘದ ಕ್ಷೇಮನಿಧಿ ರೂ.೧೨೬.೬೮ ಲಕ್ಷ,ಇತರ ಠೇವಣಾತಿ ಮತ್ತು ನಿಧಿಗಳು ಸೇರಿ ರೂ.೫೫೭.೪೨ ಲಕ್ಷ, ನಿರಖು ಠೇವಣಿ ೨೮೧.೩೪ ಲಕ್ಷ, ದುಡಿಯುವ ಬಂಡವಾಳ ೧೦೨೨.೮೦ ಲಕ್ಷ, ಇತರೆ ಸಂಸ್ಥೆಗಳಲ್ಲಿ ಪಾಲು ಹಾಗೂ ಠೇವಣಿ ರೂಪದಲ್ಲಿ ಧನವಿನಿಯೋಗಗಳು ಸೇರಿ ರೂ.೨೪೬.೯೫ ಲಕ್ಷ, ಸಂಘದ ಚರ ಸ್ಥಿರಾಸ್ತಿ ಮೌಲ್ಯ ರೂ.೩೭೫.೨೪ ಲಕ್ಷಗಳಾಗಿರುತ್ತದೆ. ತಾ. ೨೩ ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಬೆಳಿಗ್ಗೆ ೧೦.೧೫ಕ್ಕೆ ಮಹಾಸಭೆ ನಡೆಯಲಿದೆ ಎಂದರು.
ಸಂಘವು ರೈತ ಸದಸ್ಯರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ವ್ಯವಸಾಯೋಪಕರಣ, ಗೊಬ್ಬರ, ಕ್ರಿಮಿನಾಶಕ, ಗ್ರಾಹಕರ ಅವಶ್ಯಕ ವಸ್ತುಗಳಾದ ಸಿಮೆಂಟ್, ಹತ್ಯಾರು, ಬಟ್ಟೆ, ಮುಳ್ಳು ತಂತಿ, ಆರ್. ಸಿ. ಸಿ. ಮೋರಿ, ಪೈಪ್, ಗೃಹ ಬಳಕೆ ವಸ್ತುಗಳು, ಕೋವಿ, ಕೋವಿ ತೋಟ ಅಲ್ಲದೆ ಸರ್ಕಾರದ ನಿಯಂತ್ರಿತ ಆಹಾರ ಸಾಮಗ್ರಿಗಳ ವಿತರಕರಾಗಿ ಹಾಗೂ ಆರ್.ಟಿ.ಸಿ ವಿತರಿಸುವ ಕಾರ್ಯನಿರ್ವಹಿಸುತ್ತಿದ್ದು, ರೈತರ ಅನುಕೂಲಕ್ಕಾಗಿ ಪ್ರತಿ ಗಂಟೆಗೆ ೧.೫ ಟನ್ನು ಸಾಮರ್ಥ್ಯದ ಬಿನ್ನಿ ಅಕ್ಕಿಗಿರಣಿ ಹೊಂದಿರುತ್ತದೆ.
ರೈತರ ಹುಟ್ಟುವಳಿಗಳಾದ ಭತ್ತ, ಕಾಫಿ ಮತ್ತು ಕಾಳುಮೆಣಸು ದಾಸ್ತಾನು ಇಡಲು ಸುಸಜ್ಜಿತವಾದ ಗೋದಾಮು ಸೌಲಭ್ಯ ಹೊಂದಿದ್ದು, ರೈತ ಸದಸ್ಯರ ಹುಟ್ಟುವಳಿಯ ಆಧಾರದ ಮೇಲೆ ಈಡಿನ ಸಾಲ ಕೊಡುವ ವ್ಯವಸ್ಥೆ ಇದ್ದು, ರೈತ ಸದಸ್ಯರ ಅನುಕೂಲಕ್ಕಾಗಿ ಕಾಫಿಗೆ ಉತ್ತಮ ಮಾರುಕಟ್ಟೆ ದೊರಕಿಸುವ ಉದ್ದೇಶದಿಂದ ಕಾಫಿ ಗಿರಣಿ (ಹಲ್ಲಿಂಗ್) ಘಟಕವನ್ನು ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.
ಈ ಸಂಧರ್ಭ ಉಪಾಧ್ಯಕ್ಷ ಪದಾರ್ಥಿ ಎಸ್.ಮಂಜುನಾಥ್, ನಿರ್ದೇಶಕರುಗಳಾದ ಮುದ್ದಿಯಡ ಎ.ಸೋಮಯ್ಯ, ಚೋಡುಮಾಡ ಪಿ. ಶ್ಯಾಮ್, ಐನಂಡ ಕೆ.ಬೋಪಣ್ಣ, ಮಾಚಂಗಡ ಬಿ.ಮೊಣ್ಣಪ್ಪ, ಬೊಟ್ಟಂಗಡ ಎಸ್.ದಶಮಿ ದೇಚಮ್ಮ, ಮೂಕಳೇರ ಪಿ.ಶಾರದ, ಬಿ.ಎಸ್.ಚಂದ್ರಶೇಖರ್, ಪುತ್ತಾಮನೆ ದೇವದಾಸ್ ಜೀವನ್, ಹೆಚ್.ಹೆಚ್.ತಮ್ಮಯ್ಯ, ಎಂ.ಡಿಕ್ಕಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಟಿ. ಪೂನಂ ಹಾಜರಿದ್ದರು.