ನಾಪೋಕ್ಲು, ಸೆ. ೨೦: ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಮರಂದೋಡ, ಯವಕಪಾಡಿ ಗ್ರಾಮ ವ್ಯಾಪ್ತಿಯ ಕೆರೆತಟ್ಟುವಿನಿಂದ ಪಾತಿಪೊಳೆ ಎಂಬಲ್ಲಿಗೆ ಬೆಟ್ಟದ ಮಧ್ಯ ಭಾಗದ ಮೂಲಕ ಎಕ್ಸ್ಕವೇಟರ್ ಯಂತ್ರ ಬಳಸಿ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆ ನಿರ್ಮಿಸಲಾಗುತ್ತಿದ್ದು, ಈ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಚೇಲಾವರ ಗ್ರಾಮದ ದಿಲೀಪ್ ಚಂಗಪ್ಪ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

(ಮೊದಲ ಪುಟದಿಂದ) ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರು ಕಳೆದ ೪ ವರ್ಷಗಳಿಂದ ಕೊಡಗಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪ, ಮಾನವ ಪ್ರಾಣ ಹಾನಿ, ಆಸ್ತಿ ಪಾಸ್ತಿ ನಷ್ಟ ಮರೆಯಲು ಸಾಧ್ಯ. ಅದರ ನೆನಪು ಮಾಸುವ ಮುನ್ನವೇ ಬೆಟ್ಟದ ಮಧ್ಯ ಭಾಗದಲ್ಲಿ ರಸ್ತೆ ನಿರ್ಮಿಸುತ್ತಿರುವದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಈ ಬೆಟ್ಟ ಪೈಸಾರಿ ಜಾಗವಾಗಿದ್ದು, ರಸ್ತೆ ಕಾಮಗಾರಿ ಸ್ಥಗಿತಗೊಳಿಸುವಂತೆ ವೀರಾಜಪೇಟೆ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗೆ ಹಾಗೂ ಮಡಿಕೇರಿ ತಹಶೀಲ್ದಾರ್ ಅವರಿಗೆ ದೂರು ನೀಡಲಾಗಿದೆ. ಸಂಬAಧಿಸಿ ದವರು ಕೂಡಲೇ ಈ ಬಗ್ಗೆ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾಮಗಾರಿ ಬಗ್ಗೆ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಮಾಹಿತಿ ನೀಡಿ, ಇದು ಗ್ರಾಮ ಪಂಚಾಯಿತಿ ವತಿಯಿಂದ ನಡೆಸಲಾದ ಕಾಮಗಾರಿ ಅಲ್ಲ. ರಸ್ತೆ ನಿರ್ಮಾಣದ ಬಗ್ಗೆ ಪಂಚಾಯಿತಿಗೆ ಮಾಹಿತಿ ಇರಲಿಲ್ಲ. ಮಾಹಿತಿ ತಿಳಿದ ತಕ್ಷಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರಕಾರದ ಜಲಜೀವನ ಮಿಶನ್ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜುಗೊಳಿಸಲು ಪೈಪ್‌ಲೈನ್ ಅಳವಡಿಸುವ ಕಾರ್ಯಕ್ಕೆ ಟೆಂಡರ್ ನೀಡಲಾಗಿತ್ತು. ಈ ಟೆಂಡರ್ ಬಗ್ಗೆ ಗ್ರಾಮ ಪಂಚಾಯಿತಿಗಳಿಗೂ ಯಾವದೇ ಮಾಹಿತಿ ಇರುವದಿಲ್ಲ. ನೀರಿನ ಮೂಲ ಹಾಗೂ ಜಾಗ ತೋರಿಸುವದಷ್ಟೇ ಗ್ರಾಮ ಪಂಚಾಯಿತಿ ಕೆಲಸ. ಗುತ್ತಿಗೆದಾರರ ಅಚಾತರ‍್ಯದಿಂದ ರಸ್ತೆ ನಿರ್ಮಿಸಲಾಗಿದೆ. ನಿರ್ಮಿಸಲಾದ ರಸ್ತೆಯನ್ನು ಮುಚ್ಚುವದರ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡದಂತೆ ಕ್ರಮಕೈಗೊಳ್ಳಲಾಗುವದು ಎಂದು ಸ್ಪಷ್ಟಪಡಿಸಿದರು.

-ಪಿ.ವಿ.ಪ್ರಭಾಕರ್