ಮಡಿಕೇರಿ, ಸೆ. ೨೧: ಕೊಡಗಿನಲ್ಲಿ ಹಲವಾರು ಸರಕಾರಿ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳು ಕಾರ್ಯಚರಿಸುತ್ತಿವೆ.
ಹಿಂದಿನ ಕಾಲದಲ್ಲಿ ಮೂಲಭೂತ ಸೌಲಭ್ಯ ವಂಚಿತ ಭೂ ಪ್ರದೇಶಗಳಿಂದ ಕಾಲ್ನಡಿಗೆ ಮೂಲಕ ಶಾಲಾ ಪ್ರಾಂಗಣಕ್ಕೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ದೈನಂದಿನ ಭೇಟಿ ಕೊಡುತ್ತಿದ್ದರು.
ಅಂದಿಲ್ಲದ ಹೊಸ ಸಮಸ್ಯೆಯೊಂದು ನವ ಯುಗದಲ್ಲಿ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ತೀವ್ರವಾಗಿ ಕಾಡುತ್ತಿದೆ. ವಿದ್ಯಾರ್ಥಿಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಶಾಲಾ ವಾಹನದ ಬಳಕೆಗೆ ಆಡಳಿತ ಮಂಡಳಿ ಪೂರಕವಾಗಿ ನಿಷ್ಠೆಯಿಂದ ಕಾರ್ಯೋನ್ಮುಖವಾಗಿದೆ.
ಆದರೆ ವಿಪರ್ಯಾಸವೆಂದರೆ ಇಂದು ಶಾಲಾ ವಾಹನಗಳು ವಿದ್ಯಾರ್ಥಿಗಳ ಪಾಲಿಗೆ ಕೆಲವೊಮ್ಮೆ ಅಪಾಯವನ್ನೂ ಆಹ್ವಾನಿಸುತ್ತಿವೆ. ಇದಕ್ಕೆ ತಾರ್ಕಿಕ ಅಂತ್ಯ ಅನಿವಾರ್ಯವಾಗಿದೆ.
ಪ್ರಸಕ್ತ ದಿನಗಳಲ್ಲಿ ಶಾಲಾ ವಾಹನಗಳ ಅಪಘಾತಗಳು ದಿನನಿತ್ಯ ಹೆಚ್ಚುತ್ತಿವೆ.ಇದಕ್ಕೊಂದು ಶಾಶ್ವತ ಪರಿಹಾರ ಸರಕಾರ ಹಾಗೂ ಶಾಲಾ ಆಡಳಿತ ಮಂಡಳಿಯು ಕಂಡುಕೊಳ್ಳಲು ಮುತುವರ್ಜಿ ವಹಿಸಬೇಕು.
ಕೊಡಗು ಜಿಲ್ಲೆಯಲ್ಲಿನ ಕಿರಿದಾದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚು, ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಇರುವುದರಿಂದ ವಾಹನಗಳ ಸಂಚಾರ ಹೆಚ್ಚಾಗಿದೆ. ವಾರಾಂತ್ಯ ಕೂಡ ಇದರಿಂದ ಹೊರತಲ್ಲ.
ಇದಕ್ಕಿರುವ ಪರಿಹಾರವೆಂದರೆ ಸೂಕ್ತ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ರಸ್ತೆಯ ಉಬ್ಬು ಗುರುತಿಸಲು ಬಣ್ಣ ಬಳಿಯಬೇಕು. ಅಪಘಾತ ವಲಯದಲ್ಲಿ ಎಚ್ಚರಿಕೆಯ ಫಲಕ ಹಾಕಿ ರೆಡಿಯಂ ಸ್ಟಿಕರ್‌ಗಳನ್ನು ಹಾಕಬೇಕು.
ಸೂಕ್ತ ನಿಯಮ ಪಾಲಿಸಿದರೆ ಅಪಘಾತಕ್ಕೆ ಕಡಿವಾಣ ಹಾಕಬಹುದು
ಚಾಲಕರು ನಿರ್ಲಕ್ಷದಿಂದ ವಾಹನ ಚಾಲನೆ ಮಾಡಬಾರದು. ಅಪಘಾತ ಆರೋಪ ಇರದ ಚಾಲಕರನ್ನು ನೇಮಿಸಬೇಕು. ಬಸ್‌ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು. ಇದರ ಬಳಕೆಯ ಬಗ್ಗೆ ಚಾಲಕರಿಗೆ ಅರಿವಿರಬೇಕು. ಶಾಲಾ ವಾಹನ ಎಲ್ಲೆಂದರಲ್ಲಿ ನಿಲ್ಲಸಬಾರದು. ನಿಲ್ಲಿಸುವಾಗ ನಿಲ್ಲುವ ಸೂಚನಾ ಫಲಕವಿರುವ ಬೋರ್ಡ್ ಹಾಕಬೇಕು. ಚಾಲಕರು ಬಸ್ ಚಾಲನೆಯ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಸದಂತೆ ನಿರ್ಬಂಧ ಹೇರಬೇಕು. ವೇಗದ ಮಿತಿ ಗಂಟೆಗೆ ೪೦ ಕಿ.ಮೀ.ಗಿಂತ ಅಧಿಕವಾಗದಂತೆ ಎಚ್ಚರವಹಿಸಬೇಕು. ಶಾಲಾ ವಾಹನ ಬೇರೆ ವಾಹನವನ್ನು ಬೆನ್ನಟುವಾಗ ಎಚ್ಚರ ವಹಿಸಿದರೆ ಅಪಘಾತವನ್ನು ನಿಯಂತ್ರಿಸಬಹುದು.
ಆಸನಗಳಲ್ಲಿ ಮಾತ್ರ ವಿದ್ಯಾರ್ಥಿಗಳಿಗೆ ಕೂರಲು ಅವಕಾಶ ನೀಡಬೇಕು. ಕನಿಷ್ಟ ೫ ವರ್ಷವಾದರೂ ಚಾಲನೆ ಮಾಡಿದವರಿಗೆ ಮಾತ್ರ ಶಾಲಾ ವಾಹನದಲ್ಲಿ ಚಾಲನೆ ಮಾಡಲು ಅನುವು ಮಾಡಿಕೊಡಬೇಕು.
ಶಾಲಾ ವಾಹನಗಳಲ್ಲಿ ಗಲ್ಫ್ ಮಾದರಿಯಲ್ಲಿ ಸಿಸಿಟಿವಿ ಅಳವಡಿಕೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಗಾಜುಗಳಿಗೆ, ಕಿಟಕಿಗಳಿಗೆ ಗ್ರಿಲ್ ಅಳವಡಿಸಬೇಕು. ಶಾಲಾ ವಾಹನಗಳಲ್ಲಿ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕೊಂಡೊಯ್ಯಲು ಅವಕಾಶ ನೀಡಬಾರದು.
ವಿದ್ಯಾರ್ಥಿಗಳ ನೀರಿನ ಬಾಟಲಿ ಕ್ಯಾಬಿನ್ನಲಿಡುತ್ತಾರೆ. ಕೆಲ ಬಾಟಲಿಗಳು ಸಮರ್ಪಕವಾಗಿ ಮುಚ್ಚಳ ಹಾಕದೆ ಬಾಟಲಿಯ ನೀರು ಚೆಲ್ಲಿ ಉಳಿದ ವಿದ್ಯಾರ್ಥಿಗಳ ಪುಸ್ತಕಗಳಿಗೆ ಹಾನಿಯುಂಟು ಮಾಡುತ್ತಿದೆ.
ಶಾಲಾ ವಾಹನಗಳಲ್ಲಿ ಸುರಕ್ಷಿತ ವಿದ್ಯಾರ್ಥಿಗಳ ಪಯಣಕ್ಕೆ ಸಂಚಕಾರ ಬಾರದಿರಲು ಸಿಬ್ಬಂದಿಯೋರ್ವರನ್ನು ನಿಯೋಜಿಸುವುದು ಕೂಡ ಅನಿವಾರ್ಯ. ಸಂಬAಧಪಟ್ಟ ಅಧಿಕಾರಿಗಳು ಶಾಲಾ ವಾಹನಗಳ ಸುರಕ್ಷತೆಯ ಬಗ್ಗೆ ಅನಿರೀಕ್ಷಿತ ತಪಾಸಣೆ ಕೈಗೊಂಡರೆ ಚಾಲಕರು ಮುತುವರ್ಜಿ ವಹಿಸುವುದರಲ್ಲಿ ಸಂದೇಹವಿಲ್ಲ.
- ಸಿ.ಎ. ಅಶ್ರಫ್, ಚೆಯ್ಯಂಡಾಣೆ