ಕೂಡಿಗೆ, ಜ. ೨೫: ಕುಶಾಲನಗರ ಶ್ರೀ ಚೌಡೇಶ್ವರಿ ದೇವಸ್ಥಾನದ ೩೫ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮೇಲಂತಸ್ತಿನ ಗೋಪುರದ ಉದ್ಘಾಟನೆ ತಾ. ೨೬ ರಂದು (ಇಂದು) ನಡೆಯಲಿದೆ ಎಂದು ದೇವಾಲಯ ಸಮಿತಿಯ ಕಾರ್ಯದರ್ಶಿ ಡಿ.ವಿ. ರಾಜೇಶ್ ತಿಳಿಸಿದ್ದಾರೆ.
ಮೇಲಂತಸ್ತಿನ ಗೋಪುರದ ಉದ್ಘಾಟನೆಯನ್ನು ಹಂಪೆ ಹೇಮಕೂಟದ ಸ್ವಾಮೀಜಿ ಶ್ರೀ ದಯಾನಂದಪುರಿ ಮಹಾಸ್ವಾಮಿ ಅವರು ನೆರವೇರಿಸಲಿದ್ದಾರೆ. ೫.೩೦ಕ್ಕೆ ಗಣಪತಿ ಹೋಮ, ಕಲಾಹೋಮ, ನಂತರ ೬.೩೦ ಗಂಟೆಗೆ ಕಾವೇರಿ ನದಿಯಿಂದ ಮೆರವಣಿಗೆಯೊಂದಿಗೆ ಕಲಶ ತರುವುದು, ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ ನಂತರ ಮೇಲಂತಸ್ತಿನ ಗೋಪುರ ಉದ್ಘಾಟನೆ ನಡೆಯಲಿದೆ. ನಂತರ ೨.೩೦ ಗಂಟೆಗೆ ಸಭಾ ಕಾರ್ಯಕ್ರಮ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆಯಲಿದೆ.
ಆಶೀರ್ವಚನವನ್ನು ಹಂಪೆ ಹೇಮಕೂಟದ ದೇವಾಂಗ ಪೀಠಾಧಿಪತಿ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ನೀಡಲಿದ್ದಾರೆ. ಕಾರ್ಯಕ್ರಮದ. ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೆರವೇರಿಸುವರು. ಮುಖ್ಯ ಭಾಷಣಕಾರರಾಗಿ ಮಾಜಿ ಶಾಸಕ ಎಂ.ಡಿ. ಲಕ್ಷಿö್ಮÃನಾರಾಯಣ ಮತ್ತು ದೇವಾಂಗ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಪಿ. ಕಲಬುರ್ಗಿ, ಕುಶಾಲನಗರ ಪುರಸಭೆಯ ಅಧ್ಯಕ್ಷ ಜೈವರ್ಧನ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ಸಂಜೆ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯು ಮುಖ್ಯ ಬೀದಿಯ ಮೂಲಕ ಮಾರಮ್ಮ ದೇವಾಲಯದವರೆಗೆ ಸಾಗಿ ನಂತರ ಸ್ವಸ್ಥಾನ ಸೇರಲಿದೆ ಎಂದು ತಿಳಿಸಿದ್ದಾರೆ.