ಮಡಿಕೇರಿ, ಜ. ೨೪: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಂಗಳವಾರ ದಂದು ಧಾರಾಕಾರ ಮಳೆಯಾಗಿದೆ. ಇಂದು ಈ ವರ್ಷದ ಪ್ರಥಮ ಮಳೆಯಾದರೂ, ಬೆಳೆಗಾರರು - ಕೃಷಿಕರಲ್ಲಿ ಸಂತಸದ ಭಾವಕ್ಕಿಂತ ಚಿಂತೆ ಮೂಡಿಸುವಂತಾಗಿದೆ. ನಿನ್ನೆಯಿಂದ ವಾತಾವರಣದಲ್ಲಿ ಬದಲಾವಣೆ ಯಾಗಿದ್ದು, ಇಂದು ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಎದುರಾಗಿತ್ತು.
ಅಪರಾಹ್ನ ೧ ಗಂಟೆಯ ಸುಮಾರಿಗೆ ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಸುರಿಯುವದ ರೊಂದಿಗೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನು ಗಮನಿಸಿದ ಜಿಲ್ಲೆಯ ಜನರು ವಾತಾವರಣದ ಅಸಹಜತೆಯಿಂದಾಗಿ ಆತಂಕದಲ್ಲೇ ಇದ್ದರು. ಸಂಜೆ ವೇಳೆಗೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗುಡುಗು - ಮಿಂಚಿನ ಸಹಿತ ಭಾರೀ ಮಳೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಸುಮಾರು ಒಂದು ಇಂಚಿಗಿAತಲೂ ಅಧಿಕ ಮಳೆ ಸುರಿದಿರುವ ಕುರಿತು ವರದಿಯಾಗಿದೆ. ಪ್ರಸ್ತುತ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಕಾಫಿ ಬೆಳೆಗಾರರು ಭತ್ತದ ಕೃಷಿಯ ಅಂತಿಮ ಹಂತದ ಕೆಲಸ ಕಾರ್ಯದಲ್ಲಿದ್ದವರು ಭಾರೀ ಸಮಸ್ಯೆ ಎದುರಿಸುವಂತಾಗಿದೆ.
ಕಣದಲ್ಲಿ ಒಣಗಿಸಿದ್ದ ಕಾಫಿಗೆ ದಿಢೀರ್ ಮಳೆಯಿಂದ ಹಾನಿಯುಂಟಾಗಿದೆ. ಈ ಫಸಲನ್ನು ರಕ್ಷಿಸಿಕೊಳ್ಳಲು ಜನರು ಸಂಜೆ ವೇಳೆಯಲ್ಲಿ ಪ್ರಯಾಸಪಡು ವಂತಾಗಿತ್ತು. ಭತ್ತದ ಫಸಲು ಸೇರಿದಂತೆ ಒಣ ಹುಲ್ಲಿಗೂ ಧಕ್ಕೆಯಾಗಿದೆ. ಕಾಫಿ ತೋಟದ ಕೆಲಸ ಪ್ರಸ್ತುತ ಸಾಗುತ್ತಿದ್ದು, ಮಳೆಯಿಂದಾಗಿ ಕಾಫಿ ಗಿಡದಿಂದ ಉದುರಿರುವ ಕುರಿತೂ ವರದಿಯಾಗಿದೆ. ಮೊದಲೇ ಕಾರ್ಮಿಕರ
(ಮೊದಲ ಪುಟದಿಂದ) ಸಮಸ್ಯೆಯೂ ಇದ್ದು, ಇದೀಗ ಅವಧಿಗೂ ಮುನ್ನವೇ ಸುರಿದ ಮಳೆಯಿಂದಾಗಿ ಸದ್ಯದಲ್ಲಿ ಕಾಫಿ ಹೂ ಅರಳುವದರಿಂದ ಮುಂದಿನ ಕೆಲಸ ಕಾರ್ಯಗಳಿಗೂ ಅಡಚಣೆ ಯಾಗಲಿದೆ.
ಕುಟ್ಟ ವಿಭಾಗ, ಬಾಳಲೆ, ಭಾಗಮಂಡಲ, ಚೆಟ್ಟಳ್ಳಿ, ಸಿದ್ದಾಪುರ, ಕುಶಾಲನಗರ, ಕೂಡಿಗೆ, ಸುಂಟಿಕೊಪ್ಪ, ತಿತಿಮತಿ, ಗೋಣಿಕೊಪ್ಪ, ಗುಡ್ಡೆಹೊಸೂರು, ಪೊನ್ನಂಪೇಟೆ, ನಾಪೋಕ್ಲು, ಕರಿಕೆ, ವೀರಾಜಪೇಟೆ, ಶ್ರೀಮಂಗಲ, ಸೋಮವಾರಪೇಟೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಅರ್ಧ ಇಂಚಿನಿAದ ಒಂದೂವರೆ ಇಂಚುಗಳಷ್ಟು ಮಳೆ ಸುರಿದಿರುವ ಕುರಿತು ವರದಿಯಾಗಿದೆ.
ಪ್ರಸ್ತುತ ಸುರಿದ ಅವಧಿಗೂ ಮುಂಚಿನ ಮಳೆಯಿಂದಾಗಿ ಕಾಫಿ ಬೆಳೆಗಾರರು ಮತ್ತೊಮ್ಮೆ ಭಾರೀ ಸಂಕಷ್ಟ ಎದುರಿಸುವಂತಾಗಿದೆ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ|| ಸಣ್ಣುವಂಡ ಕಾವೇರಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಒಂದೆರಡು ದಿನಗಳ ಕಾಲ ಮತ್ತೆ ಮಳೆಯಾಗುವ ಕುರಿತು ಹವಾಮಾನ ಇಲಾಖೆಯ ಮುನ್ಸೂಚನೆಯಿದ್ದು, ಜನರ ಆತಂಕ ಮುಂದುವರಿದಿದೆ.