ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿ ಯಲ್ಲಿರುವ ಶ್ರೀಕ್ಷೇತ್ರ ಮನೆಹಳ್ಳಿ ಮಠವು ಈ ಹಿಂದೆ ಅಜ್ಞಾತ ಸ್ಥಳವಾಗಿದ್ದು, ನಂತರದ ಕೆಲ ಸಮಯದಲ್ಲಿಯೇ ಧಾರ್ಮಿಕತೆಯ ಶ್ರದ್ಧಾಕೇಂದ್ರವಾಗಿ ರೂಪುಗೊಂಡ ಬಗೆ ನಿಜಕ್ಕೂ ಅಶ್ಚರ್ಯ ವೆನಿಸದಿರದು. ಕಾಡುಗಳಿಂದ ಕೂಡಿದ್ದ ಪ್ರದೇಶದಲ್ಲಿಂದು ಶ್ರೀ ಗುರು ಸಿದ್ಧವೀರೇಶ್ವರ ಸ್ವಾಮಿಯವರ ಕೃಪಾ ವಿಶೇಷತೆಯಿಂದ ಗುಡಿ ಗೋಪುರಗಳು, ಪೂಜಾ ಕೈಂಕರ್ಯಗಳು, ದಾಸೋಹ ಕಾಯಕಗಳಿಂದ ಸಂಸ್ಕಾರಯುತ ಮೌಲ್ಯಗಳಿಂದ ತುಂಬಿರುವ ತಪೋಕ್ಷೇತ್ರವಾಗಿ ಬೆಳೆದುಬರುತ್ತಿದೆ.

ಕೊಡಗಿನ ಮಟ್ಟಿಗೆ ಮಠಗಳ ನಾಡು ಎಂದೇ ಪರಿಗಣಿಸಲ್ಪಡುವಂತಹ ಉತ್ತರ ಕೊಡಗಿನಲ್ಲಿ ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿ ಮಠವು ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಿಂದ ಭಕ್ತರ ಪಾಲಿಗೆ ಪುಣ್ಯಕ್ಷೇತ್ರವಾಗಿ ರೂಪುಗೊಂಡಿದೆ. ದಟ್ಟಾರಣ್ಯದಲ್ಲಿ ಹಗಲೂ ರಾತ್ರಿ ಕಳೆದು ಇದೀಗ ಭವ್ಯವಾದ ಮಠಮಂದಿರಗಳನ್ನು ನಿರ್ಮಿಸಲು ಕಾರಣಕರ್ತರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಗಳು ಮಠದ ಆಡಳಿತದ ಉಸ್ತುವಾರಿ ವಹಿಸಿದ್ದು, ಭಕ್ತರಿಗೆ ಮಾರ್ಗದರ್ಶನ ಮಾಡುತ್ತಾ ಕ್ಷೇತ್ರವನ್ನು ಸಮಾಜಮುಖಿಯನ್ನಾಗಿ ಮುನ್ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಜಾತ್ರೋತ್ಸವ, ಪೂಜಾ ಕೈಂಕರ್ಯಗಳು, ಅನ್ನದಾನಾದಿ ಸೇವೆಗಳೊಂದಿಗೆ ಗೋವುಗಳ ಸಂರಕ್ಷಣೆಯತ್ತಲೂ ಗಮನ ಹರಿಸಿರುವ ಸ್ವಾಮೀಜಿಗಳು, ಮನೆಹಳ್ಳಿ ಮಠದಲ್ಲಿಯೇ ಗೋ ಶಾಲೆ ನಿರ್ಮಿಸಿ, ಗೋ ಸಂರಕ್ಷಣೆಯ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ೪೦ಕ್ಕೂ ಹೆಚ್ಚು ಗೋವುಗಳು ಇಲ್ಲಿ ಆಶ್ರಯ ಪಡೆದಿವೆ.

ಕಳೆದ ವರ್ಷವಷ್ಟೇ ರಾಜ್ಯಮಟ್ಟದ ಗೋ ಸಮ್ಮೇಳನ ಮಾಡುವ ಮೂಲಕ ಗೋವುಗಳ ಉಳಿವಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶ್ರೀ ಮಠದ ಶ್ರೀಗಳು ಯಶಸ್ವಿಯಾಗಿದ್ದಾರೆ. ಸ್ವಾಮೀಜಿಗಳು ಕೇವಲ ಬೋಧನೆಗೆ ಮಾತ್ರ ಸೀಮಿತವಾಗದೇ ಸಮಾಜಮುಖಿ ಕಾರ್ಯಗಳಲ್ಲಿ ಸ್ವತಃ ತೊಡಗಿಸಿಕೊಳ್ಳುವಿಕೆಗೆ ಶ್ರೀಗಳು ಮಾದರಿಯಾಗಿದ್ದಾರೆ.

ಮಠದ ಹಿನ್ನೆಲೆ: ಉತ್ತರ ಕೊಡಗಿನ ಶನಿವಾರಸಂತೆ ಹೋಬಳಿ, ಅಂಕನಳ್ಳಿ ಸಮೀಪವಿರುವ ಮನೆಹಳ್ಳಿ ಪ್ರದೇಶವು ಈ ಹಿಂದೆ ಅನೇಕ ಯತಿಗಳ ತಪೋನುಷ್ಠಾನಕ್ಕೆ ಅವಕಾಶ ಒದಗಿಸಿದೆ ಎಂಬುದು ಕ್ಷೇತ್ರದ ದಾಖಲೆಗಳಲ್ಲಿ ಕಂಡು ಬರುತ್ತದೆ. ಮನೆ ಹಳ್ಳಿಯು ಕಂದಾಯ ಗ್ರಾಮವಾಗಿದ್ದರೂ ಅಷ್ಟಾಗಿ ಜನಸಂಪರ್ಕವಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮಠವು ನಿರ್ಮಾಣವಾದ ನಂತರ ಇಲ್ಲಿಗೆ ಜನಸಂಪರ್ಕ ಬೆಳೆಯಿತು. ಕ್ಷೇತ್ರವು ಹೊರ ಪ್ರಪಂಚಕ್ಕೆ ಹೆಚ್ಚಿನ ಪ್ರಚಾರವಾಯಿತು. ಭಕ್ತರು ಹೆಚ್ಚಾದಂತೆ ಕ್ಷೇತ್ರದಲ್ಲಿ ಸೇವಾ ಕಾರ್ಯಗಳು ಹೆಚ್ಚಾದವು.

ಮನೆಹಳ್ಳಿಗೆ ಆಗಮಿಸಿದ ಯತಿಗಳಲ್ಲಿ ಶ್ರೀಗುರುಸಿದ್ದವೀರೇಶ್ವರರು ಮುಖ್ಯ ಶಕ್ತಿಯಾಗಿ ಕ್ಷೇತ್ರವನ್ನು ಜಾಗೃತಗೊಳಿಸಲು ಕಾರಣೀಭೂತರಾದರು. ಬಸವಾದಿ ಶರಣರ ಕಾಲಘಟಕ್ಕೂ ಸ್ವಲ್ಪ ಮುಂಚೆಯೇ ಇವರು ಶ್ರೀ ಕ್ಷೇತ್ರಕ್ಕೆ ಸಂಚಾರ ಮಾಡುತ್ತಾ ಪುಷ್ಪಗಿರಿ ಕ್ಷೇತ್ರವನ್ನು ತಲುಪಿದ್ದರು. ಅಲ್ಲಿಂದ ಮನೆಹಳ್ಳಿಗೆ ಬಂದು ಸಾಕಷ್ಟು ಸಮಯಗಳ ಕಾಲ ಇಲ್ಲಿದ್ದರು. ಆ ಸಮಯದಲ್ಲಿಯೇ ಕ್ಷೇತ್ರಕ್ಕೆ ಪವಿತ್ರತೆ ಮತ್ತು ಪುಣ್ಯವನ್ನು ತುಂಬಿಟ್ಟು ಮುಂದೆ ಸಂಚಾರಾರ್ಥವಾಗಿ ಈಶಾನ್ಯಾಭಿಮುಖವಾಗಿರುವ ಅರಸೀಕೆರೆ ಕಡೆಗೆ ಪ್ರಯಾಣ ಬೆಳೆಸಿದರು ಎಂಬುದು ಕ್ಷೇತ್ರದ ಹಿನ್ನೆಲೆ ಗಮನಿಸುವ ಸಂದರ್ಭ ತಿಳಿದುಬರುತ್ತದೆ.

ಇವರು ನಿರಂಜನ ಪರಂಪರೆಯಲ್ಲಿಯೇ ಅವಧೂತ ಸ್ಥಿತಿಯ ನಿರಂಜನ ಸಿದ್ಧಪರಂಪರೆಯ ವರ್ಗಕ್ಕೆ ಸೇರಿದ ಯತಿಗಳಾಗಿದ್ದಾರೆ. ಇವರನ್ನು ಜನರು ‘ಸಿದ್ಧರು’ ಎಂದು ಕರೆಯುತ್ತಿದ್ದರು. ಬಸವಾದಿ ಶರಣರ ನಂತರ ವಿರಕ್ತ ಪರಂಪರೆಯ ಯತಿಗಳು ಜನರ ಮಧ್ಯದಲ್ಲಿಯೇ ವಾಸಿಸಿ ಜನರನ್ನು ತಿದ್ದುವ ಕಾರ್ಯಗಳನ್ನು ಮಾಡಿದರೆ, ಅನಘನಿರಂಜನ ಗುರುಪರಂಪರೆಯ ಯತಿಗಳು ಜನಸಾಮಾನ್ಯರಿಂದ ದೂರ ಉಳಿದು, ನಿರ್ಜನ ಪ್ರದೇಶದಲ್ಲಿ ನೆಲೆಸುತ್ತಿದ್ದರು. ಮಠ, ಆಶ್ರಯ, ಭಕ್ತ ಸಂಕುಲ, ಸೇವೆಗಳು, ಲೌಕಿಕ ಶಿಷ್ಟಾಚಾರಗಳಿಂದ ದೂರವಿರುವ ಇವರು, ತಮ್ಮ ಶರೀರ ವಿಚಾರಗಳೂ ಸಹ ಜನಸಾಮಾನ್ಯರಿಗೆ ಸುಲಭವಾಗಿ ದೊರಕದಷ್ಟು ಗೌಪ್ಯತೆಯ ಜೀವನ ನಡೆಸುತ್ತಿದ್ದರು. ಇಂತಹ ಯತಿಗಳು ತಾವು ಅನುಷ್ಠಾನ ಮಾಡಿದ ಕ್ಷೇತ್ರಗಳಲ್ಲಿ ವ್ಯಕ್ತಾನುವ್ಯಕ್ತವಾಗಿ ನೆಲೆಸಿ ಭಕ್ತಾನುಗ್ರಹ ತತ್ಪರರಾಗಿ ಶಿಷ್ಯೋದ್ಧಾರಗೈಯುತ್ತಿರುತ್ತಾರೆ ಎಂಬ ನಂಬಿಕೆ ಇದ್ದು, ಇಂತಹ ಪರಂಪರೆಗೆ ಸೇರಿದ ಶ್ರೀಗುರುಸಿದ್ದವೀರೇಶ್ವರರು ಅನುಷ್ಠಾನ ಮಾಡಿದ ಮನೆಹಳ್ಳಿ ಕ್ಷೇತ್ರದಲ್ಲಿಯೂ ಭಕ್ತರ ಪ್ರಾರ್ಥನೆಗಳು ನೆರವೇರುತ್ತಿವೆ. ಶ್ರೀಯತಿಗಳು ಶಿಷ್ಯೋದ್ಧಾರಗೈಯುತ್ತಿದ್ದಾರೆ ಎಂಬುದು ಹಲವು ಭಕ್ತರ ಅನುಭವ ವೇದ್ಯ ಮಾತಾಗಿದೆ.

ಕ್ಷೇತ್ರ ಮಾಹಿತಿ: ಕ್ರಿ.ಶ. ೧೧ನೇ ಶತಮಾನದಲ್ಲಿ ಮನೆಹಳ್ಳಿ ಪೇಟೆಯಾಗಿದ್ದು, ಮನೆಹಳ್ಳಿ ಸುತ್ತಲಿನ ಊರುಗಳಾದ ಬೆಟ್ಟದಹಳ್ಳಿ, ಮೆಣಸ, ನಿಡ್ತ, ಮುಳ್ಳೂರುಗಳು ಕೋಟೆ ಊರುಗಳಾಗಿದ್ದವು ಎಂಬುದಕ್ಕೆ ಇಂದಿಗೂ ಸಾಕ್ಷಾö್ಯಧಾರಗಳಿವೆ. ಮೆಣಸ ಗ್ರಾಮದಲ್ಲಿ ಈಗಲೂ ಕೋಟೆ ಹೊಲಗಳೆಂದು ಕರೆಯುವ ಜಮೀನುಗಳಿವೆ. ಲಿಂಗರಾಜಪ್ಪ ನಾಯ್ಕನೆಂಬ ನಾಯಕ ಇಲ್ಲಿ ಆಡಳಿತ ನಡೆಸುತ್ತಿದ್ದ; ಇದೇ ಕಾಲದಲ್ಲಿ ಮನೆಹಳ್ಳಿ ಅರಣ್ಯದಲ್ಲಿ ಗುರುಗಳು ಬಂದು ಅನುಷ್ಠಾನಗೈದರೆಂಬುದಕ್ಕೆ ಮೆಣಸ ಗ್ರಾಮದ ಕೋಟೆ ಹೊಲದಲ್ಲಿರುವ ಶಾಸನ ಸಾಕ್ಷಿಯಾಗಿದೆ.

ಇದರೊಂದಿಗೆ ಕ್ಷೇತ್ರದ ಎತ್ತರದ ಸ್ಥಳದಲ್ಲಿ ಅನುಷ್ಠಾನ ಕಟ್ಟೆಯಿದ್ದು, ಇಲ್ಲಿ ಒಂದೇ ಶಿಲೆಯಲ್ಲಿ ವೃಷಭ ಮತ್ತು ಶಿವಲಿಂಗವಿದೆ. ಯತಿಗಳು ಶಿವಲಿಂಗಕ್ಕೆ ಅಭಿಮುಖವಾಗಿ ಧ್ಯಾನ ನಿರತರಾಗಿರುವ ಚಿತ್ರಣವಿರುವ ಏಕಶಿಲೆಯಿದೆ. ಅದರ ಮುಂಭಾಗ ಕೊಳವಿದ್ದು, ಕಟ್ಟೆಯ ಬಲ ಭಾಗದಲ್ಲಿ ಐದು ಹಳೆಯ ಬಿಲ್ವ ವೃಕ್ಷಗಳಿವೆ. ಇದರೊಂದಿಗೆ ಕ್ಷೇತ್ರದ ಜಮೀನಿನ ಸುತ್ತಲೂ ಲಿಂಗಮುದ್ರೆ ಕಲ್ಲುಗಳಿದ್ದು, ಬಾಣ ಗುರುತಿನ ಕಲ್ಲುಗಳೂ ಕಾಣಸಿಗುತ್ತವೆ.

ಅಜ್ಞಾತ ಸ್ಥಳವಿಂದು ಭವ್ಯವಾದ ಮಠ: ಹಿಂದೆ ಅಜ್ಞಾತ ಸ್ಥಳವಾಗಿದ್ದ ಮನೆಹಳ್ಳಿ ಇಂದು ಭವ್ಯವಾದ ಮಠದಿಂದ ಕಂಗೊಳಿಸುತ್ತಿದೆ. ಶ್ರೀಗುರು ಸಿದ್ದವೀರೇಶ್ವರ ಯತಿಗಳು ಕ್ಷೇತ್ರದಿಂದ ಅನುಷ್ಠಾನಗೈದು ಈಶಾನ್ಯಾಭಿಮುಖವಾಗಿ ಸಂಚಾರಕ್ಕೆ ತೆರಳಿದ ಅರಸೀಕೆರೆ ಪ್ರಾಂತ್ಯದಲ್ಲಿ ಶ್ರೀಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿಗಳ ಬೆಟ್ಟವಿದೆ.

ಇದೀಗ ಮನೆಹಳ್ಳಿ ಮಠದ ಪೀಠಾಧಿಪತಿಗಳಾಗಿರುವ ಶ್ರೀಮಹಾಂತ ಶಿವಲಿಂಗ ಸ್ವಾಮೀಜಿಗಳು ಕ್ಷೇತ್ರಕ್ಕೆ ಆಗಮಿಸಿದ ಬಗೆಯೂ ಗುರು ಸಂಕಲ್ಪವೆAದೇ ನಂಬಲಾಗಿದೆ. ಶ್ರೀಗಳು ಹಾರನಹಳ್ಳಿ ಕೋಡಿಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭ ಶ್ರೀ ಸಿದ್ದೇಶ್ವರ ಸ್ವಾಮಿಗಳು ಲಿಖಿತ ಪ್ರೇರಣೆಯನ್ನು ನೀಡಿ, ಶ್ರೀಕ್ಷೇತ್ರದ ಮೂಲ ಪರಿಚಯವನ್ನಿತ್ತು ಅಜ್ಞಾತ ಸ್ಥಳವಾಗಿದ್ದ ಮನೆಹಳ್ಳಿಗೆ ಕಳುಹಿಸಿದರು. ಮನೆಹಳ್ಳಿಗೆ ಆಗಮಿಸಿದ ಆರಂಭದ ದಿನಗಳಲ್ಲಿ ಶ್ರೀಗಳು ಅರಣ್ಯದಂತಿದ್ದ ಪ್ರದೇಶದಲ್ಲಿ ಕುರುಚಲುಗಳ ನಡುವೆ ಜೋಪಡಿಯನ್ನು ನಿರ್ಮಿಸಿಕೊಂಡು ದಿನಕಳೆಯ ಲಾರಂಭಿಸಿದರು. ತದನಂತರ ಹಂತ ಹಂತವಾಗಿ ಭಕ್ತರ ಸಂಪರ್ಕ ಹೆಚ್ಚಾಗಿ ಸಣ್ಣ ಮಠ ನಿರ್ಮಾಣವಾಯಿತು. ನಂತರ ಮಠಕ್ಕೆ ಭಕ್ತಾದಿಗಳ ಆಗಮನವೂ ಹೆಚ್ಚಾಗಿ ಶ್ರೀಕ್ಷೇತ್ರವು ಇಂದು ಆಲದಮರದಂತೆ ಹಲವರಿಗೆ ಆಶ್ರಯ ನೀಡುತ್ತಿದೆ.

ಕ್ಷೇತ್ರ ಸಾನ್ನಿಧ್ಯಗಳು: ಶ್ರೀಕ್ಷೇತ್ರದಲ್ಲಿ ಶ್ರೀ ವೃಷಭಲಿಂಗೇಶ್ವರ ಸ್ವಾಮಿ, ಶ್ರೀ ವೀರಭದ್ರಸ್ವಾಮಿ, ಗುರುಗಳಾದ ಶ್ರೀ ಗುರುಸಿದ್ಧವೀರೇಶ್ವರರು, ಕ್ಷೇತ್ರ ಮಾತೆ ಶ್ರೀಪ್ರಸನ್ನ ತಪೋವನೇಶ್ವರಿ ಅಮ್ಮನವರು, ಶ್ರೀ ಗಣಪತಿ ಮತ್ತು ಕ್ಷೇತ್ರ ರಕ್ಷಕ ಶ್ರೀಚಲುವರಾಯಸ್ವಾಮಿಗಳ ಸಾನ್ನಿಧ್ಯವಿದ್ದು, ಪೂಜಾ ಕೈಂಕರ್ಯ ಗಳು ಧಾರ್ಮಿಕ ವಿಧಿವಿಧಾನಗಳಿಗೆ ಅನುಗುಣವಾಗಿ ನಡೆದುಕೊಂಡು ಬರುತ್ತಿದೆ.

ಶ್ರೀಗುರು ಸಿದ್ಧವೀರೇಶ್ವರರು ಉತ್ಸವ ಮೂರ್ತಿಯಲ್ಲಿ ಸ್ವತಃ ನೆಲೆಸಿ ಭಕ್ತರ ಅಭ್ಯುದಯಕ್ಕೆ ಕಾರಣರಾಗಿದ್ದಾರೆ ಎಂಬುದು ಭಕ್ತರ ಬಲವಾದ ನಂಬಿಕೆ. ಈ ಕಾರಣದಿಂದ ಭಕ್ತರು ಸ್ವಾಮಿಗಳನ್ನು ‘ಅಜ್ಜಯ್ಯನವರು’ ಎಂಬ ಅನ್ವರ್ಥನಾಮದಿಂದ ಕರೆಯುತ್ತಾರೆ. ಕ್ಷೇತ್ರಾಧಿಪತಿ ಶ್ರೀ ವೀರಭದ್ರಸ್ವಾಮಿಯವರು ಕ್ಷೇತ್ರದ ಎಲ್ಲಾ ಕೈಂಕರ್ಯಗಳ ಮೂಲ ಶಕ್ತಿಯಾಗಿ ನಿಂತು ಕ್ಷೇತ್ರಾಭಿವೃದ್ಧಿಗೆ ಮತ್ತು ಭಕ್ತ ಸಂಕುಲದ ಅಭಿವೃದ್ಧಿಗೆ ಕೃಪೆಯಾಗಿದ್ದಾರೆ ಎಂಬ ಅಚಲ ವಿಶ್ವಾಸ ಭಕ್ತರದ್ದು. ಸತ್ಯ, ನ್ಯಾಯ, ನಿಷ್ಠೂರ, ವೀರತ್ವಕ್ಕೆ ಹೆಸರಾದ ಶ್ರೀವೀರಭದ್ರಸ್ವಾಮಿಯನ್ನು ಈ ಹಿಂದೆ ಗುರುಗಳು ತಪಗೈದ ಸ್ಥಳವಾದ್ದರಿಂದ ಈ ಕ್ಷೇತ್ರಕ್ಕೆ ‘ತಪೋವನ’ ಎಂಬ ನಾಮಧೇಯವಿದೆ. ಕ್ಷೇತ್ರದ ಎಲ್ಲಾ ಧಾರ್ಮಿಕ ವಿಧಿಗಳು, ಆಚರಣೆಗಳು ಶ್ರೀಗುರುಗಳ ಉಪಸ್ಥಿತಿ ಯಲ್ಲಿ ನಡೆಯುತ್ತದೆ. ಕ್ಷೇತ್ರದ ಕಾರ್ಯಭಾರಕ್ಕಾಗಿ ಶ್ರೀ ತಪೋವನ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಮನೆಹಳ್ಳಿ ಗ್ರಾಮ ಎಂಬ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.

ಕ್ಷೇತ್ರದಲ್ಲಿನ ಉತ್ಸವಗಳು: ಕ್ಷೇತ್ರದ ಎಲ್ಲಾ ಸಾನ್ನಿಧ್ಯಗಳಲ್ಲಿ ಪ್ರತಿದಿನ ಬೆಳಿಗ್ಗೆ ೬.೩೦ ಮತ್ತು ಸಂಜೆ ೬.೩೦ಕ್ಕೆ ಅಭಿಷೇಕ, ಅರ್ಚನೆ, ನೈವೇದ್ಯ, ಮಹಾಮಂಗಳಾರತಿ, ದೀಪಾರಾಧನೆ ಮತ್ತು ತೀರ್ಥಪ್ರಸಾದ ವಿತರಣೆ ನೆರವೇರುತ್ತದೆ. ಪ್ರತಿ ತಿಂಗಳ ಪೌರ್ಣಮಿಯಾದ ನಂತರದ ಎರಡನೇ ದಿನದಂದು ಸಂಜೆ ವಿಶೇಷ ಆರಾಧನೆ ನಡೆಯುತ್ತದೆ. ಇದರೊಂದಿಗೆ ಗಣಪತಿ ಉತ್ಸವ, ಶರನ್ನವರಾತ್ರಿ ಉತ್ಸವ, ಸಹಸ್ರ ಕಾರ್ತಿಕ ದೀಪೋತ್ಸವ, ತೆಪ್ಪೋತ್ಸವ, ಗುರುವರ್ಯರ ವರ್ಧಂತ್ಯೋತ್ಸವ, ಶಿವರಾತ್ರಿ ವಿಶೇಷ ಪೂಜೆ, ಏಪ್ರಿಲ್ ತಿಂಗಳಿನಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ, ರಥೋತ್ಸವ, ಸ್ವಾಮಿಗಳ ವಿಶೇಷ ಉತ್ಸವಗಳು ಕ್ಷೇತ್ರದಲ್ಲಿ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ.

ಮಠದ ಬೆಳವಣಿಗೆ-ಅಭಿವೃದ್ಧಿ ಕಾರ್ಯ: ಮಠದ ಆವರಣದಲ್ಲಿ ೨೦ ಲಕ್ಷ ವೆಚ್ಚದಲ್ಲಿ ಶಿಲಾ ಮಂಟಪ ನಿರ್ಮಾಣವಾಗಿದೆ. ಕಲ್ಯಾಣಿ ಪುನರುಜ್ಜೀವನ, ಧ್ಯಾನವನ, ಯೋಗ ಮಂಟಪ ನಿರ್ಮಾಣವಾಗಬೇಕಿದೆ. ಶ್ರೀಗುರುಸಿದ್ದೇಶ್ವರ ಸ್ವಾಮೀಜಿಗಳ ಮೂಲ ಶಿಲಾ ದೇವಾಲಯ ನಿರ್ಮಾಣ ಹಂತದಲ್ಲಿದ್ದು ರೂ. ೧.೫೦ ಕೋಟಿ ಖರ್ಚು ಅಂದಾಜಿಸಲಾಗಿದೆ. ಇದರೊಂದಿಗೆ ೧೦ ಲಕ್ಷ ವೆಚ್ಚದಲ್ಲಿ ಶ್ರೀಅಮ್ಮನವರ ದೇವಾಲಯ, ೩ಲಕ್ಷ ವೆಚ್ಚದಲ್ಲಿ ಚಲುವರಾಯಸ್ವಾಮಿ ದೇವಾಲಯ, ೭೦ ಸಾವಿರ ವೆಚ್ಚದಲ್ಲಿ ತಾತ್ಕಾಲಿಕ ದಾಸೋಹ ಭವನ ನಿರ್ಮಾಣಗೊಂಡಿದ್ದು, ಶಾಶ್ವತ ಭವನಕ್ಕೆ ೫೦ ಲಕ್ಷ ವೆಚ್ಚ ನಿರೀಕ್ಷಿಸಲಾಗಿದೆ. ೧೦ ಲಕ್ಷ ವೆಚ್ಚದಲ್ಲಿ ಬ್ರಹ್ಮರಥ ನಿರ್ಮಾಣವಾಗಿದೆ. ೨.೫ ಲಕ್ಷ ವೆಚ್ಚದಲ್ಲಿ ಕ್ಷೇತ್ರದ ಮಹಾದ್ವಾರ ನಿರ್ಮಿಸಲಾಗಿದೆ. ೩೫ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಆವರಣವಿದೆ. ೧೨ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ.

ಸಾಮಾಜಿಕ ಚಟುವಟಿಕೆ: ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿನ ಗ್ರಾಮಗಳ ರೈತರಿಗೆ ಕ್ಷೇತ್ರದಿಂದಲೇ ಉಚಿತವಾಗಿ ಎರೆಹುಳು ಗೊಬ್ಬರ ಉತ್ಪಾದನಾ ತೊಟ್ಟಿಗಳನ್ನು ವಿತರಿಸಲಾಗಿದೆ. ಕ್ಷೇತ್ರದಲ್ಲಿ ಉಚಿತ ವಿದ್ಯಾರ್ಥಿ ನಿಲಯವಿದ್ದು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಆಶ್ರಯವಾಗಿದೆ. ಉಚಿತ ವಸತಿಯೊಂದಿಗೆ ಊಟದ ವ್ಯವಸ್ಥೆ ಇದೆ. ಕ್ಷೇತ್ರದ ಸುತ್ತಮುತ್ತಲ ಕೃಷಿಕರ ಭೂಮಿಗಳಿಗೆ ತೆರಳಲು ಕಚ್ಚಾ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ವರ್ಷ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಉಚಿತವಾಗಿ ಸಾಮೂಹಿಕ ವಿವಾಹ, ದೀಕ್ಷಾ ಕಾರ್ಯಕ್ರಮ, ವೈದ್ಯಕೀಯ ತಪಾಸಣಾ ಶಿಬಿರ, ಉಚಿತ ಔಷಧ ವಿತರಣೆಯನ್ನು ಪ್ರತಿ ವರ್ಷ ಜಾತ್ರಾಮಹೋತ್ಸವ ಸಂದರ್ಭ ಆಯೋಜಿಸಲಾಗುತ್ತಿದೆ.

ಕಳೆದ ವರ್ಷವಷ್ಟೇ ರಾಜ್ಯಮಟ್ಟದ ಕೃಷಿ ವಿಚಾರ ಸಂಕಿರಣ, ಗೋ ಸಮ್ಮೇಳನ ನಡೆಸಿ ಸಾವಯವ ಕೃಷಿಯ ಉಳಿವು ಹಾಗೂ ಗೋ ಸಂತತಿಯ ರಕ್ಷಣೆಯ ಬಗ್ಗೆ ಸಾವಿರಾರು ಕೃಷಿಕರಿಗೆ ಮಾಹಿತಿ ನೀಡಲಾಗಿದೆ. ಕ್ಷೇತ್ರದ ಹಿಂಭಾಗದಲ್ಲಿ ಬೃಹತ್ ಗೋ ಶಾಲೆ ನಿರ್ಮಿಸಿದ್ದು, ಗೋ ಪಾಲನೆಯಲ್ಲಿಯೂ ತಪೋವನ ತೊಡಗಿಸಿಕೊಂಡಿದೆ. ಕ್ಷೇತ್ರದ ಗೌರವಾಧ್ಯಕ್ಷರಾಗಿ ಅರಕಲಗೂಡು ಚಿಲುಮೆ ಮಠದ ಶ್ರೀ ಜಯದೇವ ಮಹಾಸ್ವಾಮಿಗಳು, ಅಧ್ಯಕ್ಷರಾಗಿ ಶ್ರೀಕ್ಷೇತ್ರ ತಪೋವನದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಗಳು ಮಾರ್ಗದರ್ಶನ ನೀಡುತ್ತಿದ್ದಾರೆ. ಇದರೊಂದಿಗೆ ವಿವಿಧ ಭಾಗದಿಂದ ಭಕ್ತಾದಿಗಳನ್ನು ಸಮಿತಿಗೆ ಸೇರ್ಪಡೆಗೊಳಿಸಲಾಗಿದ್ದು, ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಮಠವು ಪ್ರಾತಿನಿಧ್ಯ ವಹಿಸುತ್ತಿದೆ.

ಕ್ಷೇತ್ರಕ್ಕೆ ದಾರಿ: ಶ್ರೀಕ್ಷೇತ್ರ ತಪೋವನ ಮನೆಹಳ್ಳಿ ಮಠವು ಸೋಮವಾರಪೇಟೆ ತಾಲೂಕು ಕೇಂದ್ರದಿAದ ೨೫ ಕಿ.ಮೀ. ಅಂತರದಲ್ಲಿದ್ದರೆ, ಶನಿವಾರಸಂತೆ ಹೋಬಳಿ ಕೇಂದ್ರದಿAದ ದೊಡ್ಡಳ್ಳಿ ಮಾರ್ಗವಾಗಿ ನಿಡ್ತಕೊಪ್ಪಲು ಮೂಲಕ ೫ ಕಿ.ಮೀ., ಕುಶಾಲನಗರದಿಂದ ೩೮ ಕಿ.ಮೀ., ಆಲೂರು ಸಿದ್ದಾಪುರದಿಂದ ಹೊಸಗುತ್ತಿ, ಬಡುಬನಹಳ್ಳಿ, ಮೈಲಾತ್‌ಪುರ ಮಾರ್ಗ ವಾಗಿ ೬ ಕಿ.ಮೀ ಅಂತರದಲ್ಲಿದೆ. ಹಿಪ್ಲಿಗೇಟ್‌ನಿಂದ ೬ ಕಿ.ಮೀ. ದೂರದಲ್ಲಿದೆ.

- ವಿಜಯ್ ಹಾನಗಲ್,

ಸೋಮವಾರಪೇಟೆ.