ಸೋಮವಾರಪೇಟೆ, ಮಾ. ೧೮: ಇಲ್ಲಿನ ಪೊಲೀಸ್ ಇಲಾಖೆ ಹಾಗೂ ಕಾರು ಮಾಲೀಕರೊಬ್ಬರ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಕಳೆದ ಮೂರು ದಿನಗಳಿಂದ ಕಾರೊಂದು ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿದೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಶಾರದಾ ಸ್ಟೋರ್‌ಗೆ ಕಳೆದ ತಾ. ೧೪ರಂದು ಅಪರಾಹ್ನ ೩ ಗಂಟೆ ಸುಮಾರಿಗೆ ದಿನಸಿ ಸಾಮಾಗ್ರಿ ಪೊಟ್ಟಣವನ್ನು ತಂದ ಕಾರಿನ ಚಾಲಕ, ಸ್ಟೋರ್ ಮುಂಭಾಗದ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿ, ಅಂಗಡಿಯೊಳಗೆ ದಿನಸಿ ಸಾಮಾಗ್ರಿಯನ್ನಿಟ್ಟು, ಶೌಚಾಲಯಕ್ಕೆ ತೆರಳಿದ್ದ ಸಂದರ್ಭವೇ ಆಗಮಿಸಿದ ಪೊಲೀಸ್ ಸಿಬ್ಬಂದಿ, ಕಾರಿನ ಚಕ್ರಕ್ಕೆ ‘ವೀಲ್ ಲಾಕರ್’ ಅಳವಡಿಸಿದರು.

ಕೇವಲ ಏಳೆಂಟು ನಿಮಿಷದಲ್ಲಿ ಇಷ್ಟೆಲ್ಲಾ ಚಟುವಟಿಕೆ ನಡೆದು ಹೋಗಿತ್ತು! ಕಾರಿನ ಚಕ್ರಕ್ಕೆ ಲಾಕರ್ ಅಳವಡಿಸಿದ ಪೊಲೀಸ್ ಸಿಬ್ಬಂದಿ ನಂತರ ಇತ್ತ ಆಗಮಿಸಿಲ್ಲ; ಕೇವಲ ಏಳೆಂಟು ನಿಮಿಷದಲ್ಲಿಯೇ ಲಾಕರ್ ಅಳವಡಿಸಿದ್ದರಿಂದ ಕಾರಿನ ಮಾಲೀಕರೂ ಪೊಲೀಸ್ ಠಾಣೆಗೆ ತೆರಳಿಲ್ಲ.

ಇದಾಗಿ ಮೂರು ದಿನಗಳು ಕಳೆದಿವೆ. ಇದೇ ಸ್ಥಳದಲ್ಲಿ ಹತ್ತಾರು ಕಾರುಗಳು ನಿಂತು, ಹೊರಟು ಹೋಗಿವೆ. ಯಾವೊಂದು ಕಾರಿಗೂ ಲಾಕರ್ ಹಾಕಿಲ್ಲ; ನಮ್ಮ ಕಾರಿಗೆ ಮಾತ್ರ ಲಾಕರ್ ಹಾಕಲಾಗಿದೆ. ಲಾಕರ್ ಹಾಕಿದ ನಂತರವೂ ಪೊಲೀಸರು ಬಂದು ಮುಂದಿನ ಕ್ರಮದ ಬಗ್ಗೆ ತಿಳಿಸಿಲ್ಲ. ಹಾಗಾಗಿ ಕಾರನ್ನು ಇಲ್ಲೇ ಬಿಟ್ಟಿದ್ದೇವೆ ಎಂಬುದು ಕಾರಿಗೆ ಸಂಬAಧಪಟ್ಟವರ ವಾದ! ಇಬ್ಬರ ನಡುವಿನ ಗುದ್ದಾಟದಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.

ಈ ರಸ್ತೆ ಕಿರಿದಾಗಿದ್ದು, ಮಡಿಕೇರಿ, ಕುಶಾಲನಗರ, ಶಾಂತಳ್ಳಿ ಮಾರ್ಗವಾಗಿ ಆಗಮಿಸುವ ಬಸ್, ಲಾರಿ ಸೇರಿದಂತೆ ಭಾರೀ ವಾಹನಗಳು ಈ ಸ್ಥಳದಲ್ಲಿ ಬರುವ ಸಂದರ್ಭ ಸಂಚಾರದ ಸಮಸ್ಯೆ ಎದುರಾಗುತ್ತಿದೆ. ಬಸ್ ನಿಲ್ದಾಣದಿಂದ ದ್ವಿಚಕ್ರ ವಾಹನ ತೆರಳಿದರೂ ಸಹ ಅತ್ತಲಿಂದ ಬರುವ ವಾಹನ ನಿಲುಗಡೆಯಾಗಬೇಕಿದೆ.