ಮಡಿಕೇರಿ, ಮಾ. ೧೮ : ಕೊಡಗು ಜಿಲ್ಲೆಯಲ್ಲಿ ಸೃಷ್ಟಿಯಾಗಿರುವ ವನ್ಯಜೀವಿ ಹಾವಳಿ ತಡೆಗೆ ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಹೊರವಲಯದ ಗಾಲ್ಫ್ ಮೈದಾನದ ಹೆಲಿಪ್ಯಾಡ್ನಲ್ಲಿ ಬಂದಿಳಿದ ಸಿಎಂ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಡಾನೆ, ಹುಲಿ ದಾಳಿ ತಪ್ಪಿಸುವ ಸಲುವಾಗಿ ಕಾರ್ಯಪಡೆ ರಚಿಸಲಾಗಿದೆ. ರೈಲ್ವೆ ಬ್ಯಾರಿಕೇಡ್, ಕಂದಕ ನಿರ್ಮಾಣ, ಫೆನ್ಸಿಂಗ್ ಅಳವಡಿಸುವ ಮೂಲಕವೂ ವನ್ಯಜೀವಿ ಉಪಟಳ ತಡೆಯಲು ಯೋಜನೆ ಅನುಷ್ಠಾನ ಮಾಡಲಾಗಿದೆ. ಮಡಿಕೇರಿಯಿಂದ ಸಕಲೇಶಪುರದ ತನಕ ೬೮ ಕಿ.ಮೀ ದೂರ ಫೆನ್ಸಿಂಗ್ ಅಳವಡಿಸುವ ಕೆಲಸ ಒಂದು ವರ್ಷದಲ್ಲಿ ಮುಗಿಸುವ ಗುರಿ ಹೊಂದಲಾಗಿದೆ. ಇದರಿಂದ ಸಮಸ್ಯೆ ದೂರವಾಗುವ ವಿಶ್ವಾಸ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ಕಾಡಾನೆಗಳು ನಾಡಿಗೆ ಪ್ರವೇಶಿಸಿ ಇಲ್ಲಿ ಮರಿ ಹಾಕಿದ ಹಿನ್ನೆಲೆ ಆನೆಗಳ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆ ತಜ್ಞರ ಸಲಹೆ ಪಡೆಯಲಾಗುತ್ತಿದೆ. ವನ್ಯಜೀವಿ-ಮಾನವ ಸಂಘರ್ಷಕ್ಕೆ ನಾನಾ ಕಾರಣಗಳಿವೆ. ಅರಣ್ಯೀಕರಣಕ್ಕೆ ಒತ್ತು ನೀಡುವ ಜೊತೆಗೆ ವನ್ಯಜೀವಿಗಳಿಗೆ ಅಗತ್ಯ ಇರುವ ಆಹಾರ, ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ. ನೂತನ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಚಿಂತನೆ ಇದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಕಾಮಗಾರಿಗಳು ಪೂರ್ಣಗೊಳ್ಳದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಮಳೆಯಿಂದ ಕಾಮಗಾರಿ ತಡವಾಗಿತ್ತು. ಇದೀಗ ಸಾಗರೋಪಾದಿಯಲ್ಲಿ ಕೆಲಸ ನಡೆಯುತ್ತಿದ್ದು ಎಲ್ಲವೂ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.