ಗೋಣಿಕೊಪ್ಪಲು, ಮಾ. ೧೮: ದಕ್ಷಿಣ ಕೊಡಗಿನಲ್ಲಿ ಆಗುತ್ತಿರುವ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದರು.
ರೈತ ಸಂಘದ ವತಿಯಿಂದ ಗೋಣಿಕೊಪ್ಪಲುವಿನ ಚೆಸ್ಕಾಂ ಕಚೇರಿಯಲ್ಲಿ ಮೈಸೂರು ವಿಭಾಗ ಮಟ್ಟದ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ಕೊಡಗಿನ ರೈತರಿಗೆ ಆಗುತ್ತಿರುವ ವಿದ್ಯುತ್ ಸಮಸ್ಯೆಗಳ ಬಗ್ಗೆ ಮಾತನಾಡಿದ ಜಿಲ್ಲಾಧ್ಯಕ್ಷ ಮನುಸೋಮಯ್ಯ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಂದು ತಿಂಗಳೊಳಗೆ ೬೬ ಕೆವಿಯ ವಿದ್ಯುತ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕಾಫಿ ತೋಟದ ಮಧ್ಯೆ ಹಾದುಹೋಗಿರುವ ೧೧ ಕೆವಿ ವಿದ್ಯುತ್ ಲೈನ್ಅನ್ನು ಕೂಡಲೇ ರಸ್ತೆ ಬದಿಗೆ ಸ್ಥಳಾಂತರಿಸ ಬೇಕು. ಲೋವೋಲ್ಟೇಜ್ ಆಗದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿದ್ದ ರೈತ ಸಂಘದ ಪದಾಧಿಕಾರಿಗಳಾದ ಪುಚ್ಚಿಮಾಡ ಸುಭಾಶ್, ಚೆಟ್ರುಮಾಡ ಸುಜಯ್ ಬೋಪಯ್ಯ, ಆಲೆಮಾಡ ಮಂಜುನಾಥ್, ಬಾಚಮಾಡ ಭವಿಕುಮಾರ್, ಪುಚ್ಚಿಮಾಡ ರಾಯ್, ಸೇರಿದಂತೆ ಇನ್ನಿತರ ಪ್ರಮುಖರು ವಿದ್ಯುತ್ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.
ಮಡಿಕೇರಿ ಚೆಸ್ಕಾಂನ ಹಿರಿಯ ಅಧಿಕಾರಿ ಅನಿತಾಬಾಯಿ, ಮೈಸೂರಿನ ಸೋಮರಾಜ್ ರೈತರ ಪ್ರಶ್ನೆಗಳಿಗೆ ಉತ್ತರಿಸಿ ಹಲವು ಸಮಸ್ಯೆ ಗಳನ್ನು ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡಿದರು. ಗೋಣಿಕೊಪ್ಪ ಚೆಸ್ಕಾಂನ ಎಇಇ ನೀಲ್ಶೆಟ್ಟಿ, ವೀರಾಜಪೇಟೆ ಎಇಇ ಸುರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.