ಪೊನ್ನಂಪೇಟೆ.ಮಾ.೧೯: ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಓಮಿನಿ ವಾಹನ ಗದ್ದೆ ಬದಿಯ ಹಳ್ಳಕ್ಕೆ ಬಿದ್ದ ಪರಿಣಾಮ ವಾಹನದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ದುರಂತ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹರಿಹರ ಗ್ರಾಮದ ಸೋಮಯ್ಯ (ಚೋಮುಣಿ) ಎಂಬವರ ಪುತ್ರಿ, ಬಲ್ಯಮಂಡೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮೈನಾ ಮುತ್ತಮ್ಮ (೨೮) ಎಂಬವರೆ ಮೃತ ದುರ್ದೈವಿ.

ಇಂದು ಸಂಜೆ ಹರಿಹರ ಗ್ರಾಮದಲ್ಲಿರುವ ದೇವಸ್ಥಾನವೊಂದಕ್ಕೆ ತೆರಳಿ, ಪೂಜೆ ಮುಗಿಸಿ ಪರಿಚಿತರ ಓಮಿನಿಯಲ್ಲಿ ವಾಪಸು ಮನೆಗೆ ಬರುತಿದ್ದ ಸಂದರ್ಭ ಸುಮಾರು ೭.೩೦ ರ ಸಮಯದಲ್ಲಿ ಗದ್ದೆ ಬಳಿ ನಿಯಂತ್ರಣ ತಪ್ಪಿದ ವಾಹನ ಹಳ್ಳಕ್ಕೆ ಮಗುಚಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ವಾಹನದಲ್ಲಿದ್ದ ಆಕೆಯ ತಾಯಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.

ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಮೃತರ ಅಂತ್ಯಕ್ರಿಯೆ ತಾ. ೨೦ ರಂದು (ಇಂದು) ಹರಿಹರ ಗ್ರಾಮದಲ್ಲಿ ನಡೆಯಲಿದೆ.