ಗೋಣಿಕೊಪ್ಪಲು, ಮಾ. ೧೯: ಶೋಷಿತ ಸಮುದಾಯದವರು ಇನ್ನೂ ಕೂಡ ಮೂಲಭೂತ ಸೌಕರ್ಯ ಗಳಿಂದ ವಂಚಿತರಾಗಿದ್ದಾರೆ. ನೂರಾರು ಹೋರಾಟಗಳನ್ನು ನಡೆಸಿದರೂ ಇನ್ನೂ ಕೂಡ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ಸರ್ಕಾರದ ಗಮನ ಸೆಳೆಯಲು ರಾಜ್ಯ ರಸ್ತೆಯನ್ನು ಕೆಲ ಕಾಲ ಬಂದ್ ಮಾಡುವ ಮೂಲಕ ಪ್ರತಿಭಟನೆ ಮಾಡುವುದಾಗಿ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಹೆಚ್.ಎಸ್. ಕೃಷ್ಣಪ್ಪ ಬೆಳ್ಳೂರು ತಿಳಿಸಿದರು.

ಪೊನ್ನಂಪೇಟೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಒದಗಿಸಿದ ಅವರು, ತಾ. ೨೦ ರಂದು ತಿತಿಮತಿ, ಮೈಸೂರು ಮುಖ್ಯ ರಸ್ತೆಯ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಲಿದ್ದೇವೆ. ಈ ವೇಳೆ ಸ್ಥಳೀಯ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದ ಅವರು, ಗೋಣಿಕೊಪ್ಪಲುವಿನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನಿಸಲಾಗಿದೆ ಎಂದು ದೂರಿದರು.

ಈ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ತಪ್ಪಿತಸ್ಥರನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಇ. ಶಿವಕುಮಾರ್ ಮಾತನಾಡಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.

ದಕ್ಷಿಣ ಕೊಡಗಿನ ಬಹುತೇಕ ಭಾಗದಲ್ಲಿರುವ ಹಾಡಿಗಳು ಇನ್ನೂ ಕೂಡ ಮೂಲಭೂತ ಸೌಕರ್ಯಗಳನ್ನು ಹೊಂದಿಲ್ಲ. ಸರ್ಕಾರ ಕೇವಲ ಯೋಜನೆಗಳಷ್ಟೇ ಜಾರಿಗೊಳಿಸುತ್ತಿದೆ. ಆದರೆ ಯಾವುದು ಕೂಡ ಅನುಷ್ಠಾನಗೊಳ್ಳುತ್ತಿಲ್ಲ. ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದು ತಾಲೂಕು ಸಂಚಾಲಕ ವಿಜಯನ್ ಆರೋಪಿಸಿದರು. ಗೋಷ್ಠಿಯಲ್ಲಿ ಗ್ರಾಮ ಸಂಚಾಲಕರಾದ ಚಂದ್ರು ಹಾಗೂ ಚೊಕ್ರಾ ಉಪಸ್ಥಿತರಿದ್ದರು.