(ಕೆ.ಎA. ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಮಾ. ೧೯: ರಾಜ್ಯ ವಿಧಾನಸಭಾ ಚುನಾವಣಾ ಕಾವು ಬಿರುಸುಗೊಂಡಿದೆ. ಬಿಜೆಪಿ ಭದ್ರಕೋಟೆಯಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಏತನ್ಮಧ್ಯೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಗೊಂದಲ ಇನ್ನೂ ಬಗೆಹರಿದಿಲ್ಲ.
ವೀರಾಜಪೇಟೆ ಕ್ಷೇತ್ರದಲ್ಲಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಅವರು ಹೆಸರು ಫೈನಲ್ ಆಗಿದ್ದು, ಪೊನ್ನಣ್ಣ ಹೆಸರು ಘೋಷಣೆಯಾಗಲಿದೆ.
ಆದರೆ ಮಡಿಕೇರಿ ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ಎ ಜೀವಿಜಯ,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಕೆ.ಪಿ ಚಂದ್ರಕಲಾ, ಸಮಾಜ ಸೇವಕ ಹರಪಳ್ಳಿ ರವೀಂದ್ರ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ಹಾಗೂ ವಿಧಾನಪರಿಷತ್ ಪರಾಜಿತ ಅಭ್ಯರ್ಥಿ ಡಾ. ಮಂಥರ್ ಗೌಡ ಸೇರಿ ಒಟ್ಟು ಏಳು ಮಂದಿ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು.
ಅಂತಿಮವಾಗಿ ಕೆಪಿಸಿಸಿ ಎಚ್.ಎಸ್. ಚಂದ್ರಮೌಳಿ, ಬಿ.ಎ. ಜೀವಿಜಯ ಹಾಗೂ ಡಾ. ಮಂಥರ್ ಗೌಡ ಅವರ ಹೆಸರನ್ನು ಅಂತಿಮಗೊಳಿಸಿ ಎಐಸಿಸಿ ಸ್ಕಿçÃನಿಂಗ್ ಕಮಿಟಿಗೆ ಕಳುಹಿಸಿತ್ತು.
ಇದೀಗ ಮೊದಲ ಪಟ್ಟಿ ಘೋಷಣೆ ಮಾಡಲು ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷ,ಮೊದಲ ಪಟ್ಟಿಯಲ್ಲಿ ಮಡಿಕೇರಿ ಕ್ಷೇತ್ರದ ಹೆಸರು ಘೋಷಣೆ ಮಾಡದೆ, ಎರಡನೇ ಅಥವಾ ಕೊನೆಯ ಪಟ್ಟಿಯಲ್ಲಿ ಘೋಷಿಸುವ ಸಾಧ್ಯತೆ ಇದೆ.
ಚಂದ್ರಮೌಳಿ ಲಿಂಗಾಯುತ ಅಸ್ತçಕ್ಕೆ ಸಿಗುತ್ತಾ ಟಿಕೆಟ್!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್.ಎಸ್ ಚಂದ್ರಮೌಳಿಯವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬಿ.ಫಾರಂ ಕೈ ತಪ್ಪಿ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿಗೆ ಎಚ್.ಎಸ್ ಚಂದ್ರಮೌಳಿ ಸಿಲುಕಿದ್ದರು. ಈ ಬಾರಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ವೀರಶೈವ-ಲಿಂಗಾಯುತ ಸಮುದಾಯದ ಕಾಂಗ್ರೆಸ್ ಮುಖಂಡರು ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿ, ಎಐಸಿಸಿ ಸ್ಕಿçÃನಿಂಗ್ ಕಮಿಟಿ ಮುಂದೆ, ಈ ಬಾರಿ ವೀರಶೈವ-ಲಿಂಗಾಯುತರಿಗೆ ೬೫ ರಿಂದ ೭೦ ಸೀಟ್ ನೀಡಬೇಕೆಂದು ಮನವಿ ಸಲ್ಲಿಸಿದ್ದರು.
ಬೆಳಗಾವಿ, ಬೆಂಗಳೂರು ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರದಲ್ಲಿ ಲಿಂಗಾಯುತರಿಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಸಲ್ಲಿಸಿದ್ದರು. ವೀರಶೈವ-ಲಿಂಗಾಯುತರ ನಿಯೋಗದಲ್ಲಿ ಮಡಿಕೇರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಚ್.ಎಸ್. ಚಂದ್ರಮೌಳಿ ಕೂಡ ಇದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಚ್.ಎಸ್. ಚಂದ್ರಮೌಳಿ ಕೊನೆಯ ಕ್ಷಣದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ೪೫ ಸಾವಿರ ವೀರಶೈವ-ಲಿಂಗಾಯುತ ಮತದಾರರಿದ್ದಾರೆ. ಮಡಿಕೇರಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅಭಿಯಾನದಲ್ಲಿ ಕೂಡ ಎಚ್.ಎಸ್ ಚಂದ್ರಮೌಳಿ ಭಾಗವಹಿಸಿದ್ದರು.
ಒಕ್ಕಲಿಗರಿಗೆ ಮಣೆ ಹಾಕುತ್ತಾ ಕಾಂಗ್ರೆಸ್?
ವೀರಾಜಪೇಟೆಯಲ್ಲಿ ಕೊಡವ ಸಮುದಾಯಕ್ಕೆ ಸೇರಿರುವ ಎ.ಎಸ್. ಪೊನ್ನಣ್ಣ ಅವರಿಗೆ ಟಿಕೆಟ್ ಖಾತರಿಯಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಆದರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗೌಡ ಸಮುದಾಯದ ಮತದಾರರು ಇರುವ ಮಡಿಕೇರಿ ಕ್ಷೇತ್ರದಲ್ಲಿ ಯಾರಿಗೆ ಕಾಂಗ್ರೆಸ್ ಮಣೆ ಹಾಕುತ್ತೆ ಎಂಬ ಕುತೂಹಲವಿದೆ.
ಮಡಿಕೇರಿ ಕ್ಷೇತ್ರದಲ್ಲಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದ ಏಳು ಮಂದಿಯಲ್ಲಿ ಆರು ಮಂದಿ ಕೂಡ ಒಕ್ಕಲಿಗ ಗೌಡ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲೂ ಕೂಡ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಒಕ್ಕಲಿಗ ಗೌಡರಿಗೆ ಮಣೆ ಹಾಕಿದೆ. ಮಡಿಕೇರಿ ಕ್ಷೇತ್ರದಲ್ಲಿ ಅರೆಭಾಷೆ ಹಾಗೂ ಒಕ್ಕಲಿಗ ಗೌಡ ಸಮುದಾಯ ಸೇರಿ ಈ ಬಾರಿ ೮೫ ಸಾವಿರಕ್ಕೂ ಅಧಿಕ ಮತದಾರರಿದ್ದಾರೆ.
ತನ್ನದೇ ಆದ ಮತಬ್ಯಾಂಕ್ ಹೊಂದಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಾಜಿ ಶಾಸಕ ಬಿ.ಎ. ಜೀವಿಜಯ ಅವರು ಟಿಕೆಟ್‌ಗಾಗಿ ಎಐಸಿಸಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ರಾಜ್ಯಸಭಾ ಸದಸ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ರವರ ಆಪ್ತರಾಗಿರುವ ಬಿ.ಎ ಜೀವಿಜಯವರಿಗೆ ಮಡಿಕೇರಿ ಕ್ಷೇತ್ರದಲ್ಲಿ ಟಿಕೆಟ್ ನೀಡಲು ಮಾಜಿ ಸಿ.ಎಂ. ಸಿದ್ದರಾಮಯ್ಯ ಕೂಡ ಒಲವು ತೋರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತೊಂದೆಡೆ ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬಿಗ್ ಫೈಟ್ ನೀಡಿದ್ದ ಡಾ.ಮಂಥರ್ ಗೌಡ ಕೂಡ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ನಡೆಸಿದ್ದ ಆಂತರಿಕ ಸಮೀಕ್ಷೆಯಲ್ಲಿ ಮಂಥರ್ ಗೌಡ ಪರವಾಗಿ ಒಲವು ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲು ಕಂಡ ಬಳಿಕವೂ ಮಡಿಕೇರಿ ಕ್ಷೇತ್ರದಲ್ಲಿ ನಿರಂತರವಾಗಿ ಪಕ್ಷ ಸಂಘಟನೆ, ಕ್ರೀಡಾ ಕೂಟಗಳು, ಸಮಾಜ ಸೇವಾ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡುತ್ತಾ ಬಂದಿರುವ ಮಂಥರ್ ಗೌಡ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದಿಷ್ಟರ ಮಟ್ಟಿಗೆ ಜೀವ ತುಂಬಿದ್ದರು.
ಎಚ್.ಎಸ್. ಚಂದ್ರಮೌಳಿ, ಬಿ.ಎ. ಜೀವಿಜಯ ಹಾಗೂ ಡಾ. ಮಂಥರ್ ಗೌಡ ಈ ಮೂವರಲ್ಲಿ ಮಡಿಕೇರಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಯಾರಿಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಾಗಿದೆ. ಕಾಂಗ್ರೆಸ್ ಟಿಕೆಟ್ ನಿರ್ಧಾರದ ಮೇಲೆ ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿ ಯಾರೆಂದು ಕೂಡ ನಿರ್ಧರವಾಗಲಿದೆ.