ಗೋಣಿಕೊಪ್ಪಲು, ಮಾ.೧೯: ಕೊಡವರ ಆಚಾರ ವಿಚಾರ, ಪದ್ಧತಿ ಪರಂಪರೆ ಉಳಿಸುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಅಮೂಲ್ಯವಾಗಿದ್ದು, ಮನೆಯಲ್ಲಿ ಮಕ್ಕಳಿಗೆ ಕೊಡವರ ಪದ್ಧತಿಗಳನ್ನು ಹೆಚ್ಚಾಗಿ ಪರಿಚಯಿಸುವ ಮೂಲಕ ನಮ್ಮ ಸಂಸ್ಕೃತಿ ಉಳಿಸುವ ಕೆಲಸ ಮನೆಯಿಂದಲೇ ಆರಂಭವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಮಂಡೇಪAಡ ಸುಜಾ ಕುಶಾಲಪ್ಪ ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಗೋಣಿಕೊಪ್ಪ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಆಯೋಜನೆಗೊಂಡಿದ್ದ 'ಮೀನ್ಯಾರ್ ನಮ್ಮೆ ೨೦೨೩' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಆಚಾರ ವಿಚಾರ ಪದ್ಧತಿ ಪರಂಪರೆ ಉಳಿಯಲು ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು, ಇಲ್ಲಿನ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಎಚ್ಚರವಹಿಸಬೇಕು. ಭೂಮಿಯನ್ನು ಮಾರಾಟ ಮಾಡಬಾರದೆಂದರು.

ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ಕೊಟ್ಟಂಗಡ ವಿಜು ದೇವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಪೊಮ್ಮಕ್ಕಡ ಕೂಟವು ಅನೇಕ ರೀತಿಯ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಎರಡನೇ ವರ್ಷದ ಮೀನ್ಯಾರ್ ನಮ್ಮೆಯಲ್ಲಿ ಮಹಿಳೆಯರು ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಮಹಿಳೆಯರ

(ಮೊದಲ ಪುಟದಿಂದ) ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗಿದೆ. ಸದಾ ಒತ್ತಡದಲ್ಲಿ ಇರುವ ಮಹಿಳೆಯರು ಒಂದಷ್ಟು ಸಮಯ ವನ್ನು ಇತರ ಮಹಿಳೆಯರೊಂದಿಗೆ ಕಳೆಯಲು ಕಾರ್ಯಕ್ರಮ ರೂಪಿಸಲಾಗಿದೆ. ಮಹಿಳೆಯರು ಸ್ವತಃ ತಾವೇ ತಯಾರಿಸಿದ ಅನೇಕ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಮುಂದೆ ಬರಲು ಸಹಾಯಕವಾಗಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೈಕೋರ್ಟ್ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಮಾತನಾಡಿ,ಮಹಿಳೆಯರು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಹೊರ ರಾಜ್ಯ, ದೇಶದಲ್ಲಿ ಉನ್ನತ ಹುದ್ದೆಯಲ್ಲಿ ಇರುವವರು ಆರ್ಥಿಕವಾಗಿ ಹಿಂದುಳಿದ ಇಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವ ಮೂಲಕ ಉತ್ತೇಜನ ನೀಡಬೇಕು ಎಂದರು.

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ನಾಪಂಡ ರವಿ ಕಾಳಪ್ಪ ಮಾತನಾಡಿ, ನಮ್ಮ ಸಂಸ್ಕೃತಿ ಮೇಲೆ ಪ್ರೀತಿ ಹೆಚ್ಚಾಗಬೇಕು, ಸಮಾಜದ ವಿವಿಧ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದೊಯ್ಯುವ ಮೂಲಕ ಕೊಡವ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡಬೇಕು. ಇತರ ಸಂಸ್ಕೃತಿಗೆ ಗೌರವ ನೀಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಇನ್ನಷ್ಟು ಬೆಳೆಸಲು ಶ್ರಮಿಸಬೇಕು ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ಮಹಿಳೆಯರು ಸದಾ ಒಗ್ಗಟ್ಟಾಗಿರಬೇಕು ಎಂದರು.

ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿ ಮಹಿಳೆ ಆಸಕ್ತಿ ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ ಹಾಗೂ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯ ಡಾ.ಗ್ರೀಷ್ಮಾ ಬೋಜಮ್ಮ ನವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಬೆಳಿಗ್ಗೆಯಿಂದ ಸಂಜೆಯವರೆಗೂ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆ-ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವಿವಿಧ ತಿಂಡಿಗಳ ಪ್ರದರ್ಶನ (ತೀನಿಮೇಳ) ಮಾರಾಟ ಮೇಳ, ವಸ್ತು ಪ್ರದರ್ಶನ, ಮಹಿಳೆಯರಿಗಾಗಿ ಆಟ್-ಪಾಟ್ ಪೈಪೋಟಿ, ವಾಲಗತ್ತಾಟ್, ಹೂ ಅಲಂಕಾರ, ರಾಂಪ್ ವಾಕ್ ಒಳಗೊಂಡAತೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ, ಮಾಜಿ ಅಧ್ಯಕ್ಷ ರಾಜೀವ್ ಬೋಪಯ್ಯ ಮಾತನಾಡಿದರು. ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ನೆಲ್ಲಮಕ್ಕಡ ಪ್ರತಿಷ್ಠಾ ಸ್ವಾಗತಿಸಿ, ಚಕ್ಕೇರ ವಾಣಿ ಪ್ರಾರ್ಥಿಸಿ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ನಿರೂಪಿಸಿ, ಹೊಟ್ಟೆಂಗಡ ತಾರ ವಿಶ್ವನಾಥ್ ವಂದಿಸಿದರು.