ಸಿದ್ದಾಪುರ, ಮಾ. ೧೯: ಸಿದ್ದಾಪುರದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಭಾನುವಾರದಂದು ಬಿಜೆಪಿ ಕಾರ್ಯಕರ್ತರ ಮಹಾಶಕ್ತಿ ಸಂಗಮ ಸಮಾವೇಶವು ನಡೆಯಿತು. ಸಭಾ ಕಾರ್ಯಕ್ರಮವು ಸಿದ್ದಾಪುರದ ಸೆಂಟನರಿ ಚರ್ಚ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ಗ್ರಾಮ ಪಂಚಾಯಿತಿಯಿAದ ಲೋಕಸಭೆಯವರೆಗೂ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ಪಕ್ಷದ ಕಾರ್ಯಕರ್ತರು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ಬೂತ್ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು ಹಾಗೂ ಕಾರ್ಯಕರ್ತರಿಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಕರ್ತರು ಮನೆಮನೆಗೆ ತಲುಪಿಸಬೇಕೆಂದರು. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿರುವ ಸಂದರ್ಭ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿ ಜಿಲ್ಲೆಯಲ್ಲಿ ಅಶಾಂತಿಯನ್ನು ಸೃಷ್ಟಿಸಿದ್ದರು ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷವು ಇದೀಗ ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಡ್ನ ಹೆಸರಿನಲ್ಲಿ ಸುಳ್ಳು ಭರವಸೆಗಳನ್ನು ನೀಡುತ್ತಾ, ಜನರ ಕಣ್ಣಿಗೆ ಮಣ್ಣು ಎರಚುವ ತಂತ್ರ ರೂಪಿಸುತ್ತಿದೆ ಎಂದು ದೂರಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಮಾಜಿ ವಿಧಾನಪರಿಷತ್ ಸದಸ್ಯರಾದ ಕ್ಯಾ. ಗಣೇಶ್ ಕಾರ್ಣಿಕ್ ಅವರು ರಾಜ್ಯದ ಬಿಜೆಪಿ ಸರಕಾರವು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನಗಳನ್ನು ನೀಡಿದೆ ಎಂದರು. ಕೊಡವ ಕುಟುಂಬಗಳ ಐನ್ಮನೆಗಳ ರಸ್ತೆಗಳಿಗೆ ಹಾಗೂ ಕೊಡವ ಜನಾಂಗದ ಹಾಕಿ ಕ್ರೀಡೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದೆ ಎಂದರು.
ಕೇAದ್ರ ಸರಕಾರವು ರೈತರಿಗೆ ಹಾಗೂ ಬಡವರ್ಗಕ್ಕೆ ಜನ್ಧನ್ ಯೋಜನೆಯಡಿಯಲ್ಲಿ ಕೋಟ್ಯಂತರ ಮಂದಿಯ ಖಾತೆಗೆ ಹಣ ಜಮಾವಣೆ ಮಾಡಿದೆ ಎಂದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಸಿದ್ದಾಪುರದ ಶ್ರೀ ದುರ್ಗಾ ಭಗವತಿ ದೇವಾಲಯದ ಬಳಿಯಿಂದ ಸಿದ್ದಾಪುರದ ಬಸ್ ನಿಲ್ದಾಣದವರೆಗೆ ಬೈಕ್ ರ್ಯಾಲಿಯೊಂದಿಗೆ ಚಂಡೆ- ವಾದ್ಯದೊಂದಿಗೆ ಬಿಜೆಪಿ ಕಾರ್ಯಕರ್ತರ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಮಂಡಲ ಅಧ್ಯಕ್ಷ ನೆಲ್ಲಿರ ಚಲನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿ.ಕೆ. ಲೋಕೇಶ್, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತೀತಮಾಡ ರೀನಾ ತುಳಸಿ, ವೀರಾಜಪೇಟೆ ತಾಲೂಕು ವಕ್ತಾರ ಕುಟ್ಟಂಡ ಅಜಿತ್ ಕರುಂಬಯ್ಯ, ಪ್ರಮುಖರುಗಳಾದ ರಮೇಶ್, ರವಿ ಕುಶಾಲಪ್ಪ, ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಪ್ರವೀಣ್, ಗಿರೀಶ್, ಪ್ರಮುಖರಾದ ಕವಿತಾ ಬೋಜಮ್ಮ, ಇನ್ನಿತರರು ಹಾಜರಿದ್ದರು. ಬಿಜೆಪಿಯ ಹಿರಿಯ ಕಾರ್ಯಕರ್ತರುಗಳನ್ನು ಸನ್ಮಾನಿಸಲಾಯಿತು. ಪೂರ್ಣಿಮಾ ಸ್ವಾಗತಿಸಿ, ರೀಶಾ ಕಾರ್ಯಕ್ರಮ ನಿರೂಪಿಸಿದರು.