ಸೋಮವಾರಪೇಟೆ, ಮಾ. ೧೯: ಜೀವನ ಜಂಜಾಟ, ನಿತ್ಯದ ಸಂಕಷ್ಟದ ನಡುವೆಯೂ ಮಲೆನಾಡಿಗರು ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತಿರುವುದಕ್ಕೆ ಮಹಿಳೆಯರೇ ಮುಖ್ಯ ಕಾರಣ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.

ಕೊಡಗಿನ ಗಡಿ ಈಚಲಬೀಡು ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ಮಲೆನಾಡು ಜಾನಪದ ಉತ್ಸವ ಸಮಿತಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮಲೆನಾಡು ಜಾನಪದ ಉತ್ಸವವನ್ನು ಮೊರದಲ್ಲಿ ಭತ್ತ ಸುರಿದು ದೀಪ ಬೆಳಗಿಸಿ ರಾಶಿ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನೊಬ್ಬರನ್ನು ತಿದ್ದುವ ಬದಲು ನಾವು ತಿದ್ದಿಕೊಳ್ಳೋಣ ಎಂಬ ಸತ್ಯವನ್ನು ಅರಿತು ಜನಪದ ಕಲೆಗಳನ್ನು ಉಳಿಸುವ ಕೆಲಸ ಮಾಡಬೇಕಿದೆ. ತನ್ನದೇ ಶ್ರೇಷ್ಠತೆ, ಪಾವಿತ್ರö್ಯತೆ ಹೊಂದಿರುವ ಜನಪದ ಕಲೆಗಳಿಗೆ ಸರಿಸಾಟಿ ಇಲ್ಲ. ಅದೇ ನಮ್ಮ ನಾಡಿನ ಮಣ್ಣಿನ ಗುಣ ಎಂದರು. ಕರ್ನಾಟಕ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ಶತಮಾನಗಳಿಂದ ನಡೆದು ಬಂದಿರುವ ಜಾನಪದ ಸಂಸ್ಕೃತಿ ವಿಭಿನ್ನವಾಗಿದ್ದು ಮಹಿಳೆಯರಿಂದ ಅದು ಇನ್ನೂ ಉಳಿದಿದೆ ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಮಾತನಾಡಿ, ಭತ್ತ ಬೆಳೆಯುವ ಪ್ರಮಾಣ ಕಡಿಮೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶದಲ್ಲಿ ಆಹಾರದ ಕೊರತೆ ಎದುರಿಸಬೇಕಾಗುತ್ತದೆ. ಈಗಾಗಲೇ ಚೀನಾದಿಂದ ಪ್ಲಾಸ್ಟಿಕ್ ಅಕ್ಕಿ ಲಗ್ಗೆ ಇಡುತ್ತಿದ್ದು, ಮತ್ತಷ್ಟು ಆತಂಕ ಎದುರಿಸಬೇಕಾಗುತ್ತದೆ. ರೈತರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಶ್ರದ್ಧೆಯಿಂದ ಕೃಷಿ ಕೈಗೊಂಡರೆ ಯಶಸ್ಸು ಖಂಡಿತ ಸಿಗುತ್ತದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು. ಕರ್ನಾಟಕ ಜಾನಪದ ಪರಿಷತ್ ಹಾಸನ ಜಿಲ್ಲಾಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಪ್ರಾಸ್ತಾವಿಕ ನುಡಿಯಾಡಿದರು.

ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಲಾವಿದ ಮೇಟಿಕೆರೆ ಹಿರಿಯಣ್ಣ, ಮಲೆನಾಡು ಜಾನಪದ ಉತ್ಸವ ಸಮಿತಿ ಅಧ್ಯಕ್ಷ ಆರ್.ಪಿ.ಲಕ್ಷö್ಮಣ್, ಈಚಲಬೀಡು ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ದೊಡ್ಡೇಗೌಡ, ಹಿರಿಯ ವಾರ್ತಾಧಿಕಾರಿ ವಿನೋದ್ ಚಂದ್ರ, ನ್ಯಾ.ಮೂ.ಪ್ರತಿಭಾ, ಜಯಪ್ರಕಾಶ್, ಹೊಸೂರು ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ಮಂಜುನಾಥ್, ನಿವೃತ್ತ ಪ್ರಾಧ್ಯಾಪಕ ಪುಟ್ಟೇಗೌಡ, ಜಿಪಂ ಮಾಜಿ ಸದಸ್ಯೆ ಉಜ್ಮಾರಿಜ್ವಿ ಸುದರ್ಶನ್, ಬೆಳ್ಳಿಗೌಡ, ಮಧುಸೂಧನ್ ಚಿನ್ನಹಳ್ಳಿ ಇತರರಿದ್ದರು. ಸನ್ನಿಧಿ, ದವಳಾ, ಗಾನಶ್ರೀ ತಂಡÀ ಪ್ರಾರ್ಥಿಸಿ, ಕುಮಾರ್ ಕಟ್ಟೆಬೆಳಗುಲಿ ತಂಡದವರು ನಾಡಗೀತೆ ಹಾಡಿದರು. ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಆನಂದ್ ಸ್ವಾಗತಿಸಿದರು.

ಮಲೆನಾಡು ಜಾನಪದ ಉತ್ಸವದ ಅಂಗವಾಗಿ ಆಯೋಜಿಸಿದ್ದ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಗ್ರಾಮದ ಬಸವೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಗಣ್ಯರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ೧೮ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದುಕೊಟ್ಟವು.

ಸಾಧಕರಿಗೆ ಸನ್ಮಾನ: ನ್ಯಾಯಾಧೀಶೆ ಪ್ರತಿಭಾ ರೈ, ಹಿರಿಯ ನಾಗರಿಕ, ಈ.ಸಿ.ಕೃಷ್ಣೇಗೌಡ, ಉದ್ಯಮಿಗಳಾದ ಮಧುಸೂಧನ್, ಹರಪಳ್ಳಿ ರವೀಂದ್ರ, ಎಂ.ಟಿ.ಪ್ರದೀಪ್, ಸಾಹಿತಿ ಲಾವಣ್ಯ ಮೋಹನ್, ಸುಗ್ಗಿ ಕುಣಿತ ಕಲಾವಿದ ಸಿ.ಕೆ.ಸುಬ್ಬೇಗೌಡ, ವೈದ್ಯ ಡಾ. ಎಂ.ಎಸ್.ರಾಮಚAದ್ರ, ಮಾದರಿ ಕೃಷಿಕ ಕೆ.ಜಿ.ರಾಮಚಂದ್ರ, ಎಸ್.ಆರ್.ಕುಮಾರ್, ಮಾಜಿ ಸೈನಿಕ ಕಾಮನಹಳ್ಳಿ ಬೆಳ್ಳಿಗೌಡ, ರೈತ ಮುಖಂಡ ಎಚ್.ಬಿ. ರಾಮೇಗೌಡ ಅವರನ್ನು ಸನ್ಮಾನಿಸಲಾಯಿತು.