ಸಿದ್ದಾಪುರ, ಮಾ. ೧೯: ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದಾಗಿ ರೈತರು, ಮಧ್ಯಮ ವರ್ಗದವರು ಹಾಗೂ ಕೃಷಿ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಆರೋಪಿಸಿದರು

ಕಾರ್ಮಿಕರ, ರೈತರ ಹಕ್ಕುಗಳಿಗಾಗಿ ಕೊಡಗು ಜಿಲ್ಲೆಯಾದ್ಯಂತ ೩ ದಿನಗಳ ಪ್ರಚಾರ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಇಂದು ಬೆಲೆ ಏರಿಕೆಯಿಂದ ಜನಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಸಣ್ಣ ಉದ್ದಿಮೆಗಳು ಮುಚ್ಚಲ್ಪಟ್ಟು ಕೊಟ್ಯಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಹೇಳಿದರು.

ಕೃಷಿಯನ್ನೇ ನಂಬಿ ಜೀವನ ನಡೆಸುವವರು ಇಂದು ತಮ್ಮ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ ಬೀದಿಗೆ ಬಂದರೂ ಕೇಂದ್ರ ಸರ್ಕಾರ ಕ್ರಮಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಏಪ್ರಿಲ್ ೫ ರಾಷ್ಟçದಾದ್ಯಂತ ರೈತರು ಮತ್ತು ಕಾರ್ಮಿಕರು ಬೃಹತ್ ಸಂಸತ್ ಚಲೋ ಹಮ್ಮಿಕೊಂಡಿದ್ದು ಇದರ ಭಾಗವಾಗಿ ತಾ. ೧೯, ೨೦, ೨೧ ರಂದು ಜಿಲ್ಲೆಯಲ್ಲಿ ಜನ ಜಾಗೃತಿ ಜಾಥಾ ಸಂಚರಿಸಲಿದೆ ಎಂದರು.

ಈ ಸಂದರ್ಭ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪ್ರಧಾನ ರಮೇಶ್, ಅಧ್ಯಕ್ಷ ಭರತ್ ಪಿ.ಆರ್., ಸಾಬು, ಶಾಜಿ, ಎನ್.ಡಿ. ಕುಟ್ಟಪ್ಪನ್, ಶಿವಪ್ಪ, ಚಂದ್ರನ್, ಉದಯ, ಮೋಣಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.