ಸೋಮವಾರಪೇಟೆ, ಮಾ. ೧೯: ಸಮಾಜ ಬಾಂಧವರ ಅನುಕೂಲಕ್ಕಾಗಿ ಪಟ್ಟಣದ ಬೇಳೂರು ರಸ್ತೆಯಲ್ಲಿ ನೀಡಲಾದ ಜಾಗ ಪಾಳು ಬಿದ್ದಿದ್ದು, ಇಲ್ಲಿ ನಿರ್ಮಿಸಲಾಗಿರುವ ಕಲ್ಯಾಣ ಮಂಟಪ ಉಪಯೋಗಕ್ಕೆ ಬರುತ್ತಿಲ್ಲ. ದಾನ ಕೊಟ್ಟ ಉದ್ದೇಶವೂ ಈಡೇರಿಲ್ಲ. ಆದ್ದರಿಂದ ದಾನವಾಗಿ ನೀಡಿದ ಒಂದು ಎಕರೆ ಜಾಗವನ್ನು ಸೋಮವಾರಪೇಟೆ ವೀರಶೈವ ಸಮಾಜಕ್ಕೆ ಹಿಂದಿರುಗಿಸಬೇಕೆAದು ವೀರಶೈವ ಸಮಾಜ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖ ಬಿ.ಪಿ. ಶಿವಕುಮಾರ್ ಮಾತನಾಡಿ, ೧೯೯೨ರಲ್ಲಿ ಅಂದಿನ ಆಡಳಿತ ಮಂಡಳಿಯು ತಮ್ಮ ಸಮಾಜಕ್ಕೆ ಸೇರಿದ ನಗರೂರು ಗ್ರಾಮದ ಬೇಳೂರು ರಸ್ತೆಯಲ್ಲಿರುವ ಕಟ್ಟೆ ಬಸವೇಶ್ವರ ದೇವರ ಹೆಸರಿನಲ್ಲಿರುವ ೯೩/೧ರ ೧.೩೦ ಎಕರೆ ಜಾಗದ ಪೈಕಿ ೧.೦೦ ಎಕರೆ ಜಾಗವನ್ನು ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಸೋಮವಾರಪೇಟೆ ತಾಲೂಕು ವೀರಶೈವ ಸಮಾಜಕ್ಕೆ ದಾನವಾಗಿ ನೀಡಲಾಗಿರುತ್ತದೆ. ಪ್ರಸ್ತುತ ಸಮುದಾಯ ಭವನ ಯಾವುದೇ ಉಪಯೋಗಕ್ಕೆ ಇಲ್ಲದಂತಾಗಿದೆ. ಇದೀಗ ವೀರಶೈವ ಸಮಾಜ-ಬಸವೇಶ್ವರ ದೇವಾಲಯ ಸಮಿತಿ ಅಸ್ತಿತ್ವದಲ್ಲಿದೆ ಎಂದರು.
ಕಲ್ಯಾಣ ಮಂಟಪದ ಆಡಳಿತ ಮಂಡಳಿಯವರಿಗೆ ಒಂದು ವರ್ಷದ ಹಿಂದೆಯೇ ಸಮಿತಿ ಹಾಗೂ ಕಲ್ಯಾಣ ಮಂಟಪದ ಬಗ್ಗೆ ಮಾಹಿತಿ ನೀಡುವಂತೆ ಪತ್ರ ಬರೆದರೂ ಸಹ ಈವರೆಗೆ ಉತ್ತರಿಸಿಲ್ಲ.
ಕಲ್ಯಾಣ ಮಂಟಪ ನಿರ್ಮಾಣ ಹಾಗೂ ಅಭಿವೃದ್ಧಿಗಾಗಿ ಸಮಾಜ ಬಾಂಧÀವರು ಹಾಗೂ ಸಾರ್ವಜನಿಕರು, ಶಾಸಕರ ನಿಧಿಯೂ ಸೇರಿದಂತೆ ಲಕ್ಷಾಂತರ ರೂಪಾಯಿ ಹಣ ಸಂಗ್ರಹಣೆಯಾಗಿದೆ. ಈ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇರುವುದಿಲ್ಲ. ಸೋಮವಾರಪೇಟೆ ವೀರಶೈವ ಸಮಾಜದ ಕಲ್ಯಾಣ ಮಂಟಪವನ್ನು ಅಭಿವೃದ್ಧಿಪಡಿಸಬೇಕಾಗಿದೆ.
ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪದ ಆಡಳಿತ ಮಂಡಳಿಯವರು ಸೋಮವಾರಪೇಟೆ ವೀರಶೈವ ಸಮಾಜದ ಸಭೆ ಕರೆದು ಸಮಗ್ರ ಮಾಹಿತಿ ನೀಡಬೇಕೆಂದು ಬಿ.ಪಿ. ಶಿವಕುಮಾರ್ ಒತ್ತಾಯಿಸಿದರು. ತಪ್ಪಿದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಸಮಾಜದ ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ಸಿ.ಸಿ. ನಾಗರಾಜ್, ನಿರ್ದೇಶಕರಾದ ಕೆ.ಎನ್. ತೇಜಸ್ವಿ, ಎಸ್. ಮಹೇಶ್ ಇದ್ದರು.