ಶನಿವಾರಸಂತೆ, ಮಾ. ೨೦: ಪಟ್ಟಣದಿಂದ ೩ ಕಿ.ಮೀ. ದೂರದ ಚಿಕ್ಕಕೊಳತ್ತೂರು ಗ್ರಾಮದಲ್ಲಿ ೪೦೦ ವರ್ಷಗಳ ಇತಿಹಾಸವಿರುವ ಬಾವಿ ಬಸವೇಶ್ವರ ದೇವಾಲಯದಲ್ಲಿ ದೇವರ ಆರಾಧನಾ ಮಹೋತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಸುತ್ತಲಿನ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.
ಅರ್ಚಕರಾದ ಮಂಜುನಾಥ ಶರ್ಮ, ಜಯಕರ ಹಾಗೂ ಕರಿಯಪ್ಪಯ್ಯ ನೇತೃತ್ವದಲ್ಲಿ ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಹೂ, ಹಣ್ಣು-ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು. ನಂತರ ತೀರ್ಥದ ಕೊಳಕ್ಕೆ ಹರಕೆ ರೂಪದಲ್ಲಿ ಹಿಡಿ ನಾಣ್ಯ ಹಾಕಿ ತೀರ್ಥ ಕೊಂಡೊಯ್ದರು. ಕೊಳಕ್ಕೆ ಹಾಕಿದ ನಾಣ್ಯವನ್ನು ಮುಂದಿನ ವರ್ಷ ವಾರ್ಷಿಕೋತ್ಸವಕ್ಕೆ ಮೊದಲು ತೆಗೆದು ಸಂಗ್ರಹವಾದ ಹಣವನ್ನು ಸಮಿತಿಯವರು ಪೂಜಾ ಕಾರ್ಯಕ್ಕೆ ಬಳಸುತ್ತಾರೆ.
ಈ ತೀರ್ಥವನ್ನು ಜಾನುವಾರುಗಳಿಗೆ ಕುಡಿಸಿದರೆ ವಿವಿಧ ಖಾಯಿಲೆ ವಾಸಿಯಾಗುವುದು ಎಂಬ ನಂಬಿಕೆ ರೈತರಲ್ಲಿದೆ. ಉತ್ಸವಕ್ಕೆ ಬಂದಿದ್ದ ಹಲವು ಭಕ್ತರು ತಮ್ಮ ಮಕ್ಕಳ ಮುಡಿ ತೆಗೆಸಿದರು. ಹರಕೆ ಹೊತ್ತವರು ಈಡುಗಾಯಿ ಸಮರ್ಪಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು.
ಸೇವಾ ಸಮಿತಿಯ ಪದಾಧಿಕಾರಿಗಳಾದ ಸಿ.ಎನ್. ಪುಟ್ಟಪ್ಪ, ಸಿ.ಪಿ. ಸುಬ್ರಾಯ, ಸಿ.ಕೆ. ಬೆಳ್ಳಿಯಪ್ಪ, ಗ್ರಾಮದ ಮುಖಂಡರಾದ ಡಿ.ಪಿ. ಬೋಜಪ್ಪ, ಸಿ.ಜೆ. ಗಿರೀಶ್, ಕೊಮಾರಪ್ಪ, ಸುನೀಲ್ ಗೌಡ ಮತ್ತಿತರರು ಮಹೋತ್ಸವದ ನೇತೃತ್ವವನ್ನು ವಹಿಸಿದ್ದರು.