ಮಡಿಕೇರಿ, ಮಾ. ೨೦: ಅವರಿಗೆ ೮೩ ವರುಷ. ಕೃಷಿಕ ಹಾಗೂ ಪಾಕ ಶಾಸ್ತçಜ್ಞ. ಇವರು ತಯಾರಿಸುತ್ತಿದ್ದ ಹೋಳಿಗೆ, ಇವರ ಊರಾದ ಸುಳ್ಯ ಬಳಿ ಚೊಕ್ಕಾಡಿಯಲ್ಲಿ ಎಷ್ಟು ಹೆಸರು ಮಾಡಿತ್ತೆಂದರೆ, ಅವರನ್ನು ಕರೆಯುತ್ತಿದ್ದುದೇ ಹೋಳಿಗೆ ದೀಕ್ಷಿತರು ಎಂದು. ಇವರ ಪೂರ್ಣ ಹೆಸರು ಕೆಳಪಾರೆ ಕೃಷ್ಣ ದೀಕ್ಷಿತ್ ಎಂದು.
ಆರೋಗ್ಯವಾಗಿದ್ದ ಇವರಿಗೆ ತಿಂಗಳ ಹಿಂದೆ ಹೊಟ್ಟೆನೋವು ಇತ್ಯಾದಿ ಕಾಣಿಸಿಕೊಂಡಿತು. ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಹೊಂದಿದ್ದ ಇವರು ಚಿಕಿತ್ಸೆಗಾಗಿ ಮಡಿಕೇರಿಯಲ್ಲಿ ವೈಭವ್ ಮೆಡಿಕಲ್ಸ್ ಅಂಗಡಿ ನಡೆಸುತ್ತಿರುವ ಕೊನೆಯ ಪುತ್ರ ವಸಂತ್ ಅವರ ಮನೆಗೆ ಬಂದರು. ಖಾಯಿಲೆ ಕಂಡುಹಿಡಿಯಲಾಯಿತು. ಅನ್ನನಾಳದ ಕ್ಯಾನ್ಸರ್, ಕೊನೆಯ ನಾಲ್ಕನೇ ಘಟ್ಟಕ್ಕೆ ಏರಿತ್ತು. ಚಿಕಿತ್ಸೆ ಆರಂಭವಾಯಿತು. ಸರಿ, ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಮಕ್ಕಳು ತಯಾರಿ ಮಾಡಿ ಹೊರಡಿಸಲು ಅನುವು ಮಾಡಿದರು. ಕೃಷ್ಣ ದೀಕ್ಷಿತ್ ಒಪ್ಪಲಿಲ್ಲ. ಬೆಂಗಳೂರಿಗೆ ಹೊರಟರೆ ನಾನು ದಾರಿಯಲ್ಲೇ ಅಸುನೀಗುವೆ. ನಾನು ಮತ್ತು ಅಮ್ಮ (ಪತ್ನಿ) ಒಬ್ಬರನ್ನೊಬ್ಬರು ಬಿಟ್ಟು ಇರಲು ಆಗುವುದಿಲ್ಲ. ನಾನು ಅತ್ತ ಹೊರಟರೆ - ಅಮ್ಮ ಇತ್ತ ಹೊರಟುಬಿಡುತ್ತಾಳೆ. ನಾನು ಮಡಿಕೇರಿಯಲ್ಲೇ ಸಾಯುವೆ. ಇನ್ನು ಹೆಚ್ಚು ದಿನ ಇಲ್ಲ ಎಂದರು.
ಮಾರ್ಚ್ ೧೪. ಆರೋಗ್ಯದಿಂದಿದ್ದ ದೀಕ್ಷಿತ್ ಅವರ ಪತ್ನಿ ಪಾರ್ವತಿ (೮೦) ಅವರಿಗೆ ರಾತ್ರಿ ಹೃದಯಾಘಾತ ಆಯಿತು. ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಬೆಳಗಾಗುವಾಗ ಆರೋಗ್ಯವಾಗಿ ಎದ್ದ ಅವರಿಗೆ ಸ್ಕಾö್ಯನಿಂಗ್ ಮಾಡಲು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆಕೆ ಸ್ಕಾö್ಯನಿಂಗ್ ಟೇಬಲ್ನಿಂದ ಏಳಲೇ ಇಲ್ಲ. ಅಲ್ಲೇ ಕಣ್ಮುಚ್ಚಿಬಿಟ್ಟರು.
ಅವರ ಅಂತ್ಯಕ್ರಿಯೆ ಪುತ್ತೂರಿನ ಅವರ ಮನೆಯಲ್ಲಿ ಮಾಡಲು ತೀರ್ಮಾನಿಸಲಾಯಿತು. ಹೋಗುವ ಮೊದಲು ಮೃತ ಶರೀರವನ್ನು ಮಡಿಕೇರಿಯ ಮನೆಗೆ, ಅಂತಿಮ ದರ್ಶನಕ್ಕೆ ತರಲಾಯಿತು. ಕೃಷ್ಣ ದೀಕ್ಷಿತ್ ಕೋಣೆಯಲ್ಲಿ ಮಲಗಿದಲ್ಲೇ ಇದ್ದರು. ಅವರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ, ಮೃತರ ದರ್ಶನಕ್ಕೆ ಕರೆತರಲು ಪುತ್ರರು ಮುಂದಾದರು. ‘‘ಬೇಡ. ನಾನೀಗ ನೋಡುವುದಿಲ್ಲ, ಮುಂದಿನ ಎರಡು- ಮೂರು ದಿನದಲ್ಲಿ ನಾನೇ ಹೋಗಿ ಮೇಲೆ ಜೊತೆ ಆಗುವೆ’’ ಎಂದರು.
ಕೃಷ್ಣ ದೀಕ್ಷಿತರು ಮೇಲಿನ ಮಾತು ಹೇಳಿ ಇಂದಿಗೆ ಐದು ದಿನವಾಯಿತು. ಬೆಳಿಗ್ಗೆ ೮.೩೦ಕ್ಕೆ ಅವರು ಕಣ್ಮುಚ್ಚಿದರು. ಮೃತರ ಮುಖದಲ್ಲಿ ನೋವು ಕಂಡು ಬರಲಿಲ್ಲ. ನಿರ್ಲಿಪ್ತತೆ ಇತ್ತು. ಇಂದು ಮಧ್ಯಾಹ್ನ ಪುತ್ತೂರಿನ ಅವರ ಮನೆಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. -ಅನಂತ್.