ನಾಪೋಕ್ಲು, ಮಾ. ೨೦: ಸಮೀಪದ ಬೇತು ಗ್ರಾಮದ ತೋಟಗಾರಿಕಾ ಕ್ಷೇತ್ರದಿಂದ ಬೇತು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ೫.೧೬ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಎರಡು ದಿನಗಳ ಹಿಂದೆ ಒಂದು ಪಕ್ಷದ ಕಾರ್ಯಕರ್ತರು ಭೂಮಿಪೂಜೆ ನೆರವೇರಿಸಿದ್ದರು. ಅದೇ ರಸ್ತೆ ಕಾಮಗಾರಿಗೆ ಭಾನುವಾರ ಮತ್ತೊಂದು ಪಕ್ಷದ ಕಾರ್ಯಕರ್ತರು ಭೂಮಿಪೂಜೆ ನೆರವೇರಿಸಿದ್ದು ಸಾರ್ವಜನಿಕರ ನಗೆಪಾಟಲಿಗೆ ಕಾರಣವಾಗಿದೆ.

ಬಿಜೆಪಿ ಕಾರ್ಯಕರ್ತರು ಶುಕ್ರವಾರ ಗುದ್ದಲಿ ಹಿಡಿದು ರಸ್ತೆ ಕಾಮಗಾರಿ ನಮ್ಮದು ಎಂದು ಹೇಳಿಕೊಂಡರು. ಅಲ್ಲೇ ಭಾನುವಾರ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಂಗ್ರೆಸ್ ಬೆಂಬಲಿತ ಪಾರ್ವತಿ ಭೂಮಿ ಪೂಜೆ ನೆರವೇರಿಸಿದರು. ಬಳಿಕ ೧.೯೮ ಲಕ್ಷ ರೂ. ವೆಚ್ಚದ ಕೊಂಡಿರ ಐನ್‌ಮನೆಗೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಹಾಗೂ ೨.೩೬ ಲಕ್ಷ ರೂ ವೆಚ್ಚದ ಮಕ್ಕಿಕಡು ಸಂಪರ್ಕ ರಸ್ತೆ ಕಾಮಗಾರಿಗೂ ಈ ಸಂದರ್ಭ ಭೂಮಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮಯ್ಯ, ಮಾಚೆಟಿರ ಕುಶು ಕುಶಾಲಪ್ಪ, ಮಾಜಿ ಅಧ್ಯಕ್ಷ ಇಸ್ಮಾಯಿಲ್, ಕೊಂಡಿರ ರಾಜಪ್ಪ, ಕೊಂಡಿರ ನಂದ, ಶ್ಯಾಮ್, ಕಂಗಾAಡ ಶಶಿ ಮಂದಣ್ಣ , ಚೋಕಿರ ರೋಷನ್, ಸುಧಿ ಅಪ್ಪಯ್ಯ, ಯಶೋಧ, ಮಿಟ್ಟು ಸೋಮಯ್ಯ, ಗುತ್ತಿಗೆದಾರ ವಿನಾಯಕ ಸೇರಿದಂತೆ ಗ್ರಾಮಸ್ಥರು ಇದ್ದರು.

-ದುಗ್ಗಳ