ಶ್ರೀಮಂಗಲ, ಮಾ. ೨೦: ಮರೆನಾಡ್ ಶೂರ‍್ಸ್ ಕ್ಲಬ್‌ನ ವತಿಯಿಂದ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಮರೆನಾಡು ಪ್ರೌಢಶಾಲಾ ಮೈದಾನದಲ್ಲಿ ನಿನ್ನೆ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದಿನವಿಡೀ ನಡೆದ ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ಸುಮಾರು ೩೦೦ ರಷ್ಟು ಸ್ಪರ್ಧಿಗಳು ಪಾಲ್ಗೊಂಡಿದ್ದರು. ಮಹಿಳಾ ಸ್ಪರ್ಧಿಗಳೂ ಭಾಗಿಯಾಗಿದ್ದರು.

ಬೆಳಿಗ್ಗೆ ಮರೆನಾಡ್ ಶೂರ‍್ಸ್ ಕ್ಲಬ್‌ನ ಅಧ್ಯಕ್ಷ ಕುಪ್ಪುಡೀರ ಪೊನ್ನು ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ನಂದಿನೆರವAಡ ಯು. ನಾಚಪ್ಪ ಅವರು ಪಾಲ್ಗೊಂಡಿದ್ದರು.

ಕೋವಿ ಪೂಜೆಯ ನಂತರ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿ, ಕೊಡವ ಜನಾಂಗದವರಿಗೆ ಕೋವಿ ಹಕ್ಕು ವಿಶೇಷ ಅವಕಾಶದೊಂದಿಗೆ ಪರಂಪರಾಗತವಾಗಿ ಬಂದಿದೆ. ಕೊಡವರು ಈ ಮಣ್ಣಿನ ಆದಿಮ ಸಂಜಾತ ಬುಡಕಟ್ಟು ಜನಾಂಗ ದವರಾಗಿದ್ದು, ಇವರ ವಿಶೇಷತೆಗಾಗಿ ಈ ಹಕ್ಕನ್ನು ನೀಡಲಾಗಿದೆ. ಕೋವಿ ಬಳಕೆ ಜನಾಂಗದಲ್ಲಿ ಧಾರ್ಮಿಕ ಸಂಸ್ಕಾರವಾಗಿಯು ಬಂದಿರುವAತದ್ದು ಎಂದರು.

ಕಾರ್ಯಕ್ರಮದಲ್ಲಿ ಶತಾಯುಷಿ ಯಾಗಿರುವ ಕುಪ್ಪುಡೀರ ಐ. ಕಾಳಪ್ಪ ಅವರನ್ನು ಸನ್ಮಾನಿಸಲಾಯಿತು. ಸಭಾಕಾರ್ಯಕ್ರಮದ ಬಳಿಕ .೨೨, ೧೨ನೇ ಬೋರ್, ೧೨ನೇ ಬೋರ್ ಸ್ಲಗ್ ವಿಭಾಗ ಹಾಗೂ ಏರ್ ರೈಫಲ್ ಶೂಟಿಂಗ್ ಸ್ಪರ್ಧೆ ನಡೆಯಿತು.

ವಿಜೇತರು: .೨೨ ವಿಭಾಗದಲ್ಲಿ ಬಡುವಂಡ ದೇವಯ್ಯ ಪ್ರಥಮ, ನೆಲ್ಲೀರ ಧನು ದ್ವಿತೀಯ, ಶಮನ್ ಬೆಳ್ಯಪ್ಪ ತೃತೀಯ ಸ್ಥಾನ ಗಳಿಸಿದರು. ೧೨ನೇ ಬೋರ್ ವಿಭಾಗದಲ್ಲಿ ಮಾಳೆಯಂಡ ಸುಬ್ಬಯ್ಯ ಪ್ರಥಮ, ಚೋನಿರ ರಂಜನ್ ದ್ವಿತೀಯ ಹಾಗೂ ಕುಪ್ಪುಡೀರ ಪ್ರಖ್ಯಾತ್ ಚಿಣ್ಣಪ್ಪ ತೃತೀಯ ಸ್ಥಾನ ಗಳಿಸಿದರು.

ಈ ಎರಡು ವಿಭಾಗದ ವಿಜೇತರು ಕ್ರಮವಾಗಿ ರೂ. ೨೦ ಸಾವಿರ, ೧೫ ಸಾವಿರ ಹಾಗೂ ರೂ. ೧೦ ಸಾವಿರ ನಗದು ಹಾಗೂ ಟ್ರೋಫಿ ಗಳಿಸಿದರು.

೧೨ನೇ ಬೋರ್ ಸ್ಲಗ್ ಸ್ಪರ್ಧೆ ಈ ಬಾರಿಯ ವಿಶೇಷವಾಗಿತ್ತು. ಈ ಸ್ಪರ್ಧೆಯಲ್ಲಿ ಮಾಳೆಯಂಡ ವಿಜು ಚಂಗಪ್ಪ ಪ್ರಥಮ, ಪಟ್ಟಡ ಬೋಪಣ್ಣ ದ್ವಿತೀಯ ಹಾಗೂ ಬ್ರಿಜೇಶ್ ತೃತೀಯ ಸ್ಥಾನ ಪಡೆದರು. ವಿಜೇತರು ತಲಾ ರೂ. ೧೦ ಸಾವಿರ, ೭ ಸಾವಿರ ಹಾಗೂ ರೂ. ೫ ಸಾವಿರ ನಗದು ಹಾಗೂ ಟ್ರೋಫಿ ಗಳಿಸಿದರು.

ಏರ್ ರೈಫಲ್‌ನಲ್ಲಿ ಕೋಳಿಮೊಟ್ಟೆಗೆ ಗುಂಡು ಹಾರಿಸುವ ಸ್ಪರ್ಧೆಯಲ್ಲಿ ಪುತ್ತರಿರ ನಂಜಪ್ಪ ಪ್ರಥಮ, ಶಮನ್ ಬೆಳ್ಯಪ್ಪ ದ್ವಿತೀಯ ಹಾಗೂ ಕಾಳಿಮಾಡ ಶರತ್ ತೃತೀಯ ಸ್ಥಾನ ಗಳಿಸಿದರು. ಈ ವಿಜೇತರಿಗೆ ರೂ. ೫ ಸಾವಿರ, ೩ ಸಾವಿರ ಹಾಗೂ ೨ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.

ಮರೆನಾಡ್ ಶೂರ‍್ಸ್ ಕ್ಲಬ್‌ನ ಅಧ್ಯಕ್ಷ ಪೊನ್ನು ಮುತ್ತಪ್ಪ, ಕಾರ್ಯದರ್ಶಿ ನೆಲ್ಲೀರ ಧನು, ಚೋನಿರ ಸೋಮಣ್ಣ, ಚೋನಿರ ಸಜನ್, ಕುಪ್ಪುಡೀರ ಪ್ರಖ್ಯಾತ್, ನೆಲ್ಲಿರ ರಾಖಿ, ಕುಪ್ಪಣಮಾಡ ಮಂಜು, ಕಾಯಪಂಡ ಮೋಹನ್, ಕಳ್ಳಂಗಡ ನವೀನ್, ಕಾಳಿಮಾಡ ಶರತ್, ಕರ್ತಮಾಡ ಸುಜನ್ ಮತ್ತಿತರರು ಉಸ್ತುವಾರಿ ವಹಿಸಿದ್ದರು.