ಮಡಿಕೇರಿ, ಮಾ. ೨೦: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊದವಾಡ ಗ್ರಾಮದಲ್ಲಿರುವ ರಸ್ತೆಗಳು ಬಹಳ ವರ್ಷಗಳಿಂದ ಹದಗೆಟ್ಟಿದ್ದು, ಕೂಡಲೇ ರಸ್ತೆ ಸರಿಪಡಿಸದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿರುವದಾಗಿ ಹೊದವಾಡ ಹೈದ್ರೂಸ್ ಜುಮಾ ಮಸೀದಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಸೀದಿ ಅಧ್ಯಕ್ಷ ಅಬೂಬಕರ್, ಹೊದವಾಡ ಗ್ರಾಮದಲ್ಲಿ ೩ಸಾವಿರಕ್ಕೂ ಅಧಿಕ ಮಂದಿ ವಾಸ ಮಾಡುತ್ತಿದ್ದು, ಮಸೀದಿ, ದೇವಾಲಯ ಹಾಗೂ ಶಾಲೆಗಳಿವೆ. ಪ್ರತಿನಿತ್ಯ ಮಕ್ಕಳು ಹಾಗೂ ಸಾರ್ವಜನಿಕರು ಒಡಾಡುತ್ತಿದ್ದು, ವಾಹನಗಳೂ ಸಂಚರಿಸುತ್ತವೆ. ಆದರೆ ರಸ್ತೆಗಳು ತೀರಾ ಹದಗೆಟ್ಟಿರುವದರಿಂದ ಸಂಚರಿಸಲು ಕಷ್ಟಸಾಧ್ಯವಾಗಿದೆ ಎಂದು ಆರೋಪಿಸಿದರು. ಹೊದವಾಡ ಗ್ರಾಮದಿಂದ ಬೊಳಿಬಾಣೆಯಿಂದ ಕೇಮಾಟ್‌ಗೆ ಸಂಪರ್ಕ ಸಾಧಿಸುವ ೯ಕಿ.ಮೀ. ದೂರದ ರಸ್ತೆಯಲ್ಲಿ ೮ ಕಿ.ಮೀ.ವರೆಗೆ ಮಾತ್ರ ದುರಸ್ತಿಪಡಿಸಲಾಗಿದೆ. ಒಂದು ಕಿ.ಮೀ. ರಸ್ತೆಯನ್ನು ದುರಸ್ತಿಪಡಿಸದೆ ಹಾಗೇ ಬಿಡಲಾಗಿದೆ; ಇದಕ್ಕೆ ಕಾರಣವೇನೆಂದು ಪ್ರಶ್ನಿಸಿದರು. ಈ ಗ್ರಾಮದಲ್ಲಿ ಎಲ್ಲ ಜಾತಿ, ಧರ್ಮದವರು ವಾಸವಾಗಿದ್ದು, ಜನಪ್ರತಿನಿಧಿಗಳು ಅಭಿವೃದ್ಧಿಯತ್ತ ಗಮನ ಹರಿಸುತ್ತಿಲ್ಲ. ಹಾಗಾಗಿ ಮುಂಬರುವ ಚುನಾವಣೆಗೆ ಮುಂಚಿತವಾಗಿ ರಸ್ತೆ ಅಭಿವೃದ್ಧಿ ಪಡಿಸದೇ ಇದ್ದಲ್ಲಿ ಮತ ಚಲಾಯಿಸದೇ ಇರಲು ಗ್ರಾಮಸ್ಥರೆಲ್ಲ ಸೇರಿ ತೀರ್ಮಾನ ಕೈಗೊಂಡಿ ರುವದಾಗಿ ಹೇಳಿದರು.

ಗೋಷ್ಠಿಯಲ್ಲಿ ಮಸೀದಿ ಉಪಾಧ್ಯಕ್ಷ ಕರೀಂ, ಕಾರ್ಯದರ್ಶಿ ಮುಷ್ಜಿದ್, ಹಂಸ, ಉಮ್ಮರ್, ಅಬ್ದುಲ್ ರೆಹಮಾನ್ ಇದ್ದರು.