ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಎಂ ಇಬ್ರಾಹಿಂ ರಾಜಿನಾಮೆ
ಬೆಂಗಳೂರು, ಮೇ ೨೪: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದ್ದರಿಂದ ಸೋಲಿನ ಹೊಣೆಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಎಂ ಇಬ್ರಾಹಿಂ ರಾಜಿನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ, ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಹೀಗಾಗಿ ನಾನು ರಾಜೀನಾಮೆ ನೀಡಿದ್ದೇನೆ ಎಂದರು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರಿಗೆ ಶುಭವಾಗಲಿ. ರಾಜ್ಯದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಇತ್ತು. ಇದನ್ನು ಕಾಂಗ್ರೆಸ್ನವರು ಹಣಬಲ ಸೇರಿದಂತೆ ಬೇರೆ ಬೇರೆ ವಿಚಾರದಲ್ಲಿ ಗೆದ್ದಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷ. ಹಣ ಇಲ್ಲ. ನಮಗೆ ಯಾರ ಬೆಂಬಲವೂ ಇರಲಿಲ್ಲ. ಆದರೂ ನಾವು ೬೦ ಲಕ್ಷ ಮತ ಪಡೆದಿದ್ದೇವೆ ಎಂದರು. ಲೋಕಸಭೆ ಚುನಾವಣೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಒಟ್ಟಾಗಿ ಕೆಲಸ ಪ್ರಾರಂಭಿಸುತ್ತೇವೆ. ನೂತನ ಮುಖ್ಯಮಂತ್ರಿಗೆ ಒಳ್ಳೆಯದಾಗಲಿ. ಕೊಟ್ಟ ಭರವಸೆ ಈಡೇರಿಸಲಿ ಎಂದು ಸಿಎಂ ಇಬ್ರಾಹಿಂ ಹೇಳಿದರು.
ಟಿಪ್ಪು ಜಯಂತಿ ಕೈಬಿಟ್ಟ ಸರ್ಕಾರ
ಬೆಂಗಳೂರು, ಮೇ ೨೪: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿವಾದಿತ ಟಿಪ್ಪು ಜಯಂತಿ ಆಚರಣೆ ಕೈ ಬಿಟ್ಟಿದೆ. ೨೦೧೩ರಿಂದ ೨೦೧೮ರವರೆಗೆ ಇದ್ದ ಅಧಿಕಾರವಧಿಯಲ್ಲಿ ಟಿಪ್ಪು ಜಯಂತಿ ಆಚರಿಸಿ ರಾಜ್ಯದಲ್ಲಿ ಹಿಂದೂಗಳ ಆಕ್ಷೇಪಕ್ಕೆ ಕಾರಣವಾಗಿದ್ದರು. ೨೦೨೩ರ ಏಪ್ರಿಲ್ನಿಂದ ೨೦೨೪ರ ಮಾರ್ಚ್ ತಿಂಗಳವರೆಗಿನ ಮಹಾಪುರಷರ ಜಯಂತಿ ಹಾಗೂ ಆಚರಣೆ ಕಾರ್ಯಕ್ರಮಗಳ ಒಟ್ಟು ೩೧ ಜಯಂತಿಗಳ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದ್ದು, ಟಿಪ್ಪು ಜಯಂತಿ ಆಚರಿಸದಿರಲು ನಿರ್ಧರಿಸಲಾಗಿದೆ. ಮಹಾಪುರುಷರ ಮೊದಲ ರಾಜ್ಯಮಟ್ಟದ ಜಯಂತಿಯನ್ನು ಬೆಂಗಳೂರಿನಲ್ಲಿ ತದನಂತರ ವರ್ಷಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಆಚರಿಸಲು ಮತ್ತು ರಾಜ್ಯಮಟ್ಟದ ಜಯಂತಿ ಕಾರ್ಯಕ್ರಮಕ್ಕೆ ಆಯಾ ಜಿಲ್ಲಾಧಿಕಾರಿಗಳಿಗೆ ೫ ಲಕ್ಷ ರೂ. ಜಿಲ್ಲಾಮಟ್ಟದ ಜಯಂತಿ ಆಚರಣೆಗೆ ೫೦ ಸಾವಿರ ರೂ. ಹಾಗೂ ತಾಲ್ಲೂಕು ಮಟ್ಟದ ಜಯಂತಿಗೆ ೨೦ ಸಾವಿರ ರೂ. ನಿಗದಿಪಡಿಸಿ ಆದೇಶಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ೮ ಉಗ್ರರ ಮನೆಗಳ ಮೇಲೆ ಪೊಲೀಸ್ ವಿಶೇಷ ತನಿಖಾ ಘಟಕ ದಾಳಿ
ಶ್ರೀನಗರ, ಮೇ ೨೪: ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಿಶೇಷ ತನಿಖಾ ಘಟಕ ಇಂದು ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಎಂಟು ಪಾಕಿಸ್ತಾನ ಮೂಲದ ಭಯೋತ್ಪಾದಕರ ಮನೆಗಳ ಮೇಲೆ ದಾಳಿ ನಡೆಸಿz. ಚೆನಾಬ್ ಕಣಿವೆ ಪ್ರದೇಶದಲ್ಲಿ ಉಗ್ರಗಾಮಿಗಳನ್ನು ಪುನರುಜ್ಜೀವನಗೊಳಿಸಲು ಈ ಭಯೋತ್ಪಾದಕರು ನಡೆಸಿದ ಪ್ರಯತ್ನಗಳನ್ನು ವಿಫಲಗೊಳಿಸಲು ಕಿಶ್ತ್ವಾರ್ನ ಪದ್ದರ್, ಕೇಶ್ವಾನ್ ಮತ್ತು ಥಾಕ್ರೈ ಮತ್ತು ರಾಂಬನ್ನ ಖಾರಿ ಮತ್ತು ಬನಿಹಾಲ್ಗಳಲ್ಲಿ ದಾಳಿ ನಡೆಸಲಾಯಿತು. ಜಮ್ಮುವಿನ ವಿಶೇಷ ಎನ್ಐಎ ನ್ಯಾಯಾಲಯದಿಂದ ಸರ್ಚ್ ವಾರಂಟ್ಗಳನ್ನು ಪಡೆದ ನಂತರ ಆಜಾದ್ ಹುಸೇನ್, ಗಾಜಿ-ಉದ್-ದಿನ್, ಬಶೀರ್ ಅಹ್ಮದ್ ಮುಘಲ್ ಮತ್ತು ಸತ್ತರ್ ದಿನ್ ಅಲಿಯಾಸ್ ರಜಬ್ ಅವರ ಮನೆಗಳಲ್ಲಿ ಶೋಧ ನಡೆಸಲಾಗಿದೆ ಎಂದು ಕಿಶ್ತ್ವಾರ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಖಲೀಲ್ ಅಹ್ಮದ್ ಪೋಸ್ವಾಲ್ ಹೇಳಿದ್ದಾರೆ. ದಾಳಿಗಳ ಮೂಲಕ ಉಗ್ರಗಾಮಿಗಳಿಗೆ ಬೆಂಬಲ ನೀಡುತ್ತಿರುವವರನ್ನು ಗುರುತಿಸುವ ಮೂಲಕ ಜಿಲ್ಲೆಯಲ್ಲಿ ಉಗ್ರಗಾಮಿ ಪರಿಸರ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿವೆ ಎಂದು ಅಧಿಕಾರಿ ಹೇಳಿದರು. ಇದಕ್ಕೂ ಮುನ್ನ ಮೇ ೧೮ ರಂದು, ಎಸ್ಐಯು ತಂಡಗಳು ಜಿಲ್ಲೆಯಲ್ಲಿ ಮೂವರು ಶಂಕಿತ ವ್ಯಕ್ತಿಗಳನ್ನು ಹೊರತುಪಡಿಸಿ ಪ್ರಸ್ತುತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಿಂದ ಕಾರ್ಯನಿರ್ವಹಿಸುತ್ತಿರುವ ಐವರು ಭಯೋತ್ಪಾದಕರ ಮನೆಗಳ ಮೇಲೆ ದಾಳಿ ನಡೆಸಿದ್ದವು. ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಮತ್ತು ಭಯೋತ್ಪಾದನೆಯನ್ನು ಶಾಶ್ವತಗೊಳಿಸುವುದಕ್ಕಾಗಿ ಆರೋಪಿಗಳನ್ನು ನ್ಯಾಯಾಂಗ ನಿರ್ಣಯಕ್ಕೆ ಒಳಪಡಿಸಲು ಸಂಗ್ರಹಿಸಲಾದ ಸಾಕ್ಷ್ಯಗಳನ್ನು ತನಿಖೆ ಮಾಡಲಾಗುತ್ತದೆ ಎಂದು ಪೋಸ್ವಾಲ್ ಹೇಳಿದರು
ಸಂಸತ್ ಕಟ್ಟಡ ಉದ್ಘಾಟನೆ ಬಹಿಷ್ಕರಿಸಿದ ವಿಪಕ್ಷಗಳು
ನವದೆಹಲಿ, ಮೇ ೨೪: ರಾಷ್ಟçಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ನೂತನ ಕಟ್ಟಡ ಉದ್ಘಾಟಿಸದಿರುವುದು ಅಥವಾ ಸಮಾರಂಭಕ್ಕೆ ಅವರನ್ನು ಆಹ್ವಾನಿಸದಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಸತ್ತಿನ ಸಂಕೀರ್ಣದ ಉದ್ಘಾಟನೆಯನ್ನು ಕಾಂಗ್ರೆಸ್, ಎಡ, ಎಎಪಿ ಮತ್ತು ಟಿಎಂಸಿ ಸೇರಿದಂತೆ ೧೯ ವಿರೋಧ ಪಕ್ಷಗಳು ಬಹಿಷ್ಕರಿಸುವ ನಿರ್ಧಾರವನ್ನು ಘೋಷಿಸಿವೆ. ಈ ಬೆಳವಣಿಗೆ ನಂತರ ಮಾತನಾಡಿರುವ ರಾಹುಲ್ ಗಾಂಧಿ, ಪ್ರಜಾಪ್ರಭುತ್ವದ ಆತ್ಮವನ್ನು ಸಂಸತ್ತಿನಿAದ ಹೊರ ಹಾಕಲಾಗಿದ್ದು, ಹೊಸ ಕಟ್ಟಡದಲ್ಲಿ ಯಾವುದೇ ಮೌಲ್ಯ ಕಾಣುತ್ತಿಲ್ಲ ಎಂದಿದ್ದಾರೆ. ರಾಷ್ಟçಪತಿಗಳು ಸಂಸತ್ತಿನ ಉದ್ಘಾಟನೆ ಮಾಡದಿರುವುದು ಅಥವಾ ಸಮಾರಂಭಕ್ಕೆ ಅವರನ್ನು ಆಹ್ವಾನಿಸದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಸಂಸತ್ತನ್ನು ಅಹಂಕಾರದ ಇಟ್ಟಿಗೆಗಳಿಂದ ನಿರ್ಮಿಸಲಾಗಿಲ್ಲ, ಸಾಂವಿಧಾನಿಕ ಮೌಲ್ಯಗಳ ಮೂಲಕ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಆಹ್ವಾನದ ಮೇರೆಗೆ ಮೋದಿ ಅವರು ಮೇ ೨೮ ರಂದು ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರಪತಿಗಳು ಭಾರತದಲ್ಲಿ ರಾಷ್ಟ್ರದ ಮುಖ್ಯಸ್ಥರು ಮಾತ್ರವಲ್ಲ, ಅವರು ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದು, ಅವರೇ ಕಟ್ಟಡ ಉದ್ಘಾಟಿಸಬೇಕೇ ಹೊರತು ಪ್ರಧಾನಿಯಲ್ಲ ಎಂದು ವಿರೋಧ ಪಕ್ಷಗಳು ಹೇಳಿವೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲು
ಬೆಳ್ತಂಗಡಿ, ಮೇ ೨೪: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೪ ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಾಗಿದೆ. ಈ ಸಂಬAಧ ಪುತ್ತೂರು ನಗರಸಭಾ ಸದಸ್ಯ ಮೊಹಮ್ಮದ್ ರಿಯಾಝ್ ಅವರು ಪುತ್ತೂರು ನಗರ ಠಾಣೆಯಲ್ಲಿ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ ೨೪ ಹಿಂದೂ ಕಾರ್ಯಕರ್ತರನ್ನ ಹತ್ಯೆ ಮಾಡಿದ್ದಾರೆ ಎಂದು ಹರೀಶ್ ಪೂಂಜಾ ಅವರು ಸುಳ್ಳು ಆರೋಪ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ಅಲ್ಲದೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೊಹಮ್ಮದ್ ರಿಯಾಝ್ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಸಂಬAಧ ಹರೀಶ್ ಪೂಂಜಾ ಮಾತನಾಡಿರುವ ವಿಡಿಯೋ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾರೆ. ಇದೇ ತಿಂಗಳ ೨೨ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದ ಬಿಜೆಪಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಹರೀಶ್ ಪೂಂಜಾ, ೨೪ ಹಿಂದೂ ಕಾರ್ಯಕರ್ತರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹತ್ಯೆ ಮಾಡಿದ್ದಾರೆಂದು ಹೇಳಿದ್ದರು.