ಕುಶಾಲನಗರ, ಮೇ ೨೫ : ಚುನಾವಣೆ ಕೊನೆಯ ಗಳಿಗೆಯಲ್ಲಿ ಜೆಡಿಎಸ್ ಮತ್ತು ಎಸ್ಡಿಪಿಐ ಅಭ್ಯರ್ಥಿಗಳು ಚುನಾವಣಾ ರಂಗದಿAದ ಶರಣಾಗತಿ ಆದ ಹಿನ್ನೆಲೆಯಲ್ಲಿ ತನಗೆ ಅಲ್ಪ ಮತದ ಸೋಲು ಉಂಟಾಗಲು ಕಾರಣವಾಯಿತು ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ತಾನು ೨೫ ವರ್ಷಗಳ ಕಾಲ ಸತತವಾಗಿ ಶಾಸಕನಾಗಿದ್ದು ದಾಖಲೆಯಾಗಿದೆ. ಈ ಬಾರಿ ಅಲ್ಪ ಪ್ರಮಾಣದ ಮತದ ಅಂತರದಲ್ಲಿ ಸೋಲು ಕಂಡಿದ್ದೇನೆ. ಕ್ಷೇತ್ರದಲ್ಲಿ ನೇರ ಹಣಾಹಣಿ ನಡೆದಿದ್ದು, ಕಾಂಗ್ರೆಸ್ ಜನರಿಗೆ ಹಲವು ಸುಳ್ಳು ಭರವಸೆಗಳನ್ನು ನೀಡಿದೆ. ಜನರಿಗೆ ಹೊರೆ ಮಾಡುವ ಮೂಲಕ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ಗಳನ್ನು ಘೋಷಣೆ ಮಾಡಿದೆ. ಜನ ತಾವಾಗಿಯೇ ಈ ಬಗ್ಗೆ ತಿಳಿಯುವ ಕಾಲ ಸನ್ನಿಹಿತವಾಗಲಿದೆ ಎಂದರು. ಸರ್ಕಾರ ಈ ಮೂಲಕ ಸಂಕಷ್ಟಕ್ಕೆ ಸಿಲುಕಲಿದೆ. ಈ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂದ ರಂಜನ್ ಅವರು, ಬಿಜೆಪಿ ಜಯಭೇರಿ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರಪೇಟೆಯ ಗುತ್ತಿಗೆದಾರನ ಮೇಲೆ ಸುಳ್ಳು ಆಪಾದನೆ ಹೊರಿಸಿ ಕಾಂಗ್ರೆಸ್ಸಿನ ಕೆಲವು ವ್ಯಕ್ತಿಗಳು ಗೂಂಡಾ ಪ್ರವೃತ್ತಿ ಮೆರೆದಿರುವುದು ಸರಿಯಲ್ಲ ಎಂದು ರಂಜನ್ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಈ ಸಂದರ್ಭ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ ಎಂ ಚರಣ್, ವೈಶಾಕ್ ಮತ್ತಿತರರಿದ್ದರು.