ಸಿದ್ದಾಪುರ, ಮೇ ೨೫: ನೆಲ್ಯಹುದಿಕೇರಿ ಗ್ರಾಮ ಹಾಗೂ ಅಭ್ಯತ್ಮಂಗಲ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖಾ ಅಧಿಕಾರಿಗಳು ಕೈಗೊಂಡರು.
ಕುಶಾಲನಗರದ ಮೀನುಕೊಲ್ಲಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ನೆಲ್ಯಹುದಿಕೇರಿ ಬೆಟ್ಟದಕಾಡು, ಕಾಟಿಬಾಣೆ, ಅರೆಕಾಡು ಅಭ್ಯತ್ಮಂಗಲ ಗ್ರಾಮಗಳ ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದವು. ಅಲ್ಲದೇ ಮಾನವನ ಮೇಲೆ ಮನೆಗಳ ಮೇಲೆ ದಾಳಿ ನಡೆಸಿ ಕೃಷಿ ಫಸಲುಗಳನ್ನು ತಿಂದು ತುಳಿದು ನಾಶಗೊಳಿಸುತ್ತಿದೆ. ಮಿತಿಮೀರಿದ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದಂತಾಗಿದೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರದಂದು ಆನೆ ಕಾರ್ಯಪಡೆ ಅಧಿಕಾರಿರವರ ನೇತೃತ್ವದಲ್ಲಿ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಕಾಫಿ ತೋಟಗಳಿಂದ ಕಾಡಿಗೆ ಅಟ್ಟುವ ಪ್ರಯತ್ನವನ್ನು ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಡೆಸಿದರು.
ಕಾಫಿ ತೋಟದೊಳಗೆ ಕೆಸರಿನ ನಡುವೆ ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ೧೫ಕ್ಕೂ ಅಧಿಕ ಕಾಡಾನೆಗಳು ಕಾಫಿ ತೋಟದೊಳಗೆ ಇರುವುದು ಕಂಡು ಬಂತು. ಈ ಪೈಕಿ ಮರಿಯಾನೆಗಳು, ಸಲಗಗಳು ಕಂಡು ಬಂದವು ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದರು. ಕಾಡಾನೆಗಳ ಹಿಂಡಿನ ಪೈಕಿ ಕಾಡಾನೆಗಳು ೩ ಗುಂಪುಗಳಾಗಿ ಬೇರ್ಪಟ್ಟಿದ್ದು, ಈ ಪೈಕಿ ಒಂದು ಗುಂಪಿನ ೬ಕ್ಕೂ ಅಧಿಕ ಕಾಡಾನೆಗಳನ್ನು ಕಾರ್ಯಾಚರಣೆ ತಂಡವು ಕಾವೇರಿ ನದಿ ದಾಟಿಸಿ ದುಬಾರೆ ಅರಣ್ಯಕ್ಕೆ ಅಟ್ಟಿದವು. ಆದರೆ ಮತ್ತೊಂದು ಗುಂಪಿನ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆಯಿಡುತ್ತಾ ಸಿಬ್ಬಂದಿಗಳನ್ನು ಸುತ್ತಾಡಿಸುತ್ತಾ ಸುಸ್ತು ಭರಿಸಿದರು. ಕಾಡಾನೆಗಳ ಹಿಂಡುಗಳು ಬೇರೆ ಬೇರೆ ಗುಂಪಾಗಿ ಬೇರ್ಪಟ್ಟಿದ್ದು, ಕೆಲವು ಕಾಡಾನೆಗಳು ಮರಿಯಾನೆಗಳ ಜೊತೆ ಸೇರಿ ತೋಟವನ್ನು ಬಿಟ್ಟು ಕದಲುತ್ತಿಲ್ಲ. ಅಲ್ಲದೇ ಕೆಲವು ಕಾಡಾನೆಗಳು ತೋಟದಲ್ಲಿ ಉಳಿದುಕೊಂಡಿವೆ. ಆಹಾರವನ್ನು ಅರಸಿಕೊಂಡು ಕಾಡಿನಿಂದ ನಾಡಿಗೆ ಲಗ್ಗೆಯಿಟ್ಟಿರುವ ಕಾಡಾನೆಗಳು ಹಾಡುಹಗಲೇ ರಾಜಾರೋಷವಾಗಿ ಸುತ್ತಾಡುತಿವೆ.
ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಎಷ್ಟೇ ಪ್ರಯತ್ನಪಟ್ಟರೂ ಕೂಡ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಕಾಡಿಗೆ ತೆರಳಲು ಹಿಂದೇಟು ಹಾಕುತ್ತಿದ್ದು, ಅರಣ್ಯ ಇಲಾಖಾಧಿಕಾರಿಗಳಿಗೆ ತಲೆ ನೋವಾಗಿದೆ. ಕಾರ್ಯಾಚರಣೆ ತಂಡಕ್ಕೆ ಸುರಿಯುತ್ತಿರುವ ಮಳೆಯೂ ಕೂಡ ಅಡ್ಡಿಯಾಗುತ್ತಿದ್ದು, ಕಾಫಿ ತೋಟಗಳಿಂದ ಕಾಡಿಗೆ ತೆರಳದ ಆನೆಗಳ ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸುವುದಾಗಿ ತಿಳಿದು ಬಂದಿದೆ. ಕುಶಾಲನಗರ ವಲಯ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಗೋಪಾಲ್, ಅರಣ್ಯಾಧಿಕಾರಿ ಕೆ.ವಿ ಶಿವರಾಂ ಹಾಗೂ ಉಪ ವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ನೇತೃತ್ವದಲ್ಲಿ ಕಾರ್ಯಪಡೆಯ ಅಧಿಕಾರಿ ಚಂಗಪ್ಪ ಹಾಗೂ ೩೫ ಕ್ಕೂ ಅಧಿಕ ಸಿಬ್ಬಂದಿಗಳು ಭಾಗವಹಿಸಿದ್ದರು.
-ವಾಸು. ಎ.ಎನ್.