ಮಡಿಕೇರಿ, ಮೇ ೨೫: ಕೊಡಗು ಜಿಲ್ಲೆ ಕಳೆದ ಎರಡು ದಶಕಗಳಿಂದ ಬಹುತೇಕ ಬಿಜೆಪಿ ಪಕ್ಷದ ಭದ್ರಕೋಟೆಯಾಗಿತ್ತು. ಜಿಲ್ಲೆಯ ಬಹುತೇಕ ಆಡಳಿತ ವ್ಯವಸ್ಥೆಗಳನ್ನು ಹಿಡಿಯುವಲ್ಲಿ ಬಿಜೆಪಿ ಪಕ್ಷ ಭಾರೀ ಯಶಸ್ಸು ಕಂಡಿತ್ತು. ಎಂ.ಪಿ., ಎಂ.ಎಲ್.ಎ., ಎಂ.ಎಲ್.ಸಿ., ಗ್ರಾಮ ಪಂಚಾಯಿತಿ ಮಟ್ಟದಿಂದ ತಾ.ಪಂ., ಜಿ.ಪಂ., ಪ.ಪಂ.ಗಳು, ನಗರಸಭೆ, ಡಿ.ಸಿ.ಸಿ. ಬ್ಯಾಂಕ್, ಕೃಷಿಪತ್ತಿನ ಸಹಕಾರ ಸಂಘಗಳು, ಆರ್.ಎಂ.ಸಿ.ಗಳು ಸೇರಿದಂತೆ ಎಲ್ಲವೂ ಕಮಲಮಯ ವಾಗಿತ್ತು. ಯಾವುದೇ ಚುನಾವಣೆಗಳು ನಡೆದರೂ, ಭಾರತೀಯ ಜನತಾ ಪಕ್ಷವೇ ಮೇಲುಗೈ ಸಾಧಿಸಿಕೊಂಡು ಬರುತ್ತಿದ್ದುದು ಸುಮಾರು ೨೦ ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಕಂಡುಬAದಿದ್ದು ಇತಿಹಾಸ. ಹಲವಷ್ಟು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಹಿಡಿತ ಸಾಧಿಸಲು ನಡೆಸುತ್ತಿದ್ದ ಎಲ್ಲಾ ಪ್ರಯತ್ನಗಳೂ ವಿಫಲವಾಗುತ್ತಿದ್ದವು. ಇಂತಹ ಸನ್ನಿವೇಶದಲ್ಲಿ ೧೬ನೆಯ ವಿಧಾನಸಭೆಗೆ ಚುನಾವಣೆ ಎದುರಾಗಿದ್ದು, ಬಿಜೆಪಿಯ ಪ್ರಭಾವಿ ಶಾಸಕರುಗಳೇ ಮತ್ತೆ ಆ ಪಕ್ಷದಿಂದ ಟಿಕೆಟ್ ಗಳಿಸುವಲ್ಲಿ ಯಶಸ್ವಿಯಾಗುವುದರೊಂದಿಗೆ ಈ ಬಾರಿಯೂ ಮತ್ತೆ ಬಿಜೆಪಿಯೇ ಕೊಡಗಿನಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ಅತೀವ ಆತ್ಮವಿಶ್ವಾಸ ಬಿಜೆಪಿ ಪಾಳಯದಲ್ಲಿತ್ತು. ಕಾಂಗ್ರೆಸ್ ಪಕ್ಷ ಈ ಚುನಾವಣೆಗೆ ಹೊಸ ಮುಖಗಳಾಗಿ ಯುವ ನಾಯಕರುಗಳಾದ ಡಾ. ಮಂಥರ್ ಗೌಡ ಹಾಗೂ ಎ.ಎಸ್. ಪೊನ್ನಣ್ಣ ಅವರುಗಳನ್ನು ಕಣಕ್ಕೆ ಇಳಿಸಿತ್ತು. ಈ ಇಬ್ಬರು ತುಸು ಪ್ರಭಾವಿಗಳಾಗಿ ಹೊರಹೊಮ್ಮುತ್ತಿದ್ದುದನ್ನು ಬಿಜೆಪಿ ಪಕ್ಷ ಅವಲೋಕಿಸಿ ಅಭ್ಯರ್ಥಿ ಬದಲಾವಣೆಯಾಗಬೇಕೆಂಬ ಕೂಗಿನ ನಡುವೆಯೂ ಕಾಂಗ್ರೆಸ್ನ ಹೊಸ ಮುಖಗಳನ್ನು ಎದುರಿಸಲು ಹಾಲಿ ಶಾಸಕರುಗಳೇ ಪ್ರಬಲರು ಎಂಬ ತೀರ್ಮಾನವೆಂಬAತೆ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರುಗಳನ್ನೇ ಕಣಕ್ಕಿಳಿಸಿ ಚುನಾವಣೆ ಎದುರಿಸಲು ಮುಂದಾಗಿತ್ತು.
ಆದರೆ, ಈ ಬಾರಿ ಬಿಜೆಪಿ ಭದ್ರಕೋಟೆಯಲ್ಲಿ ಕಮಲದ ಕಮಾಲ್ ನಡೆಯಲಿಲ್ಲ. ಜನರು ಕಾಂಗ್ರೆಸ್ನ ಇಬ್ಬರು ಹುರಿಯಾಳುಗಳನ್ನು ಆಯ್ಕೆ ಮಾಡಿರುವುದು ವಿಶೇಷವಾಗಿದೆ. ಈ ಮೂಲಕ ಸುಮಾರು ೨೦ ವರ್ಷಗಳ ಸುದೀರ್ಘ ಅವಧಿಯ ಬಳಿಕ ಕೊಡಗಿನ ರಾಜಕೀಯದಲ್ಲಿ ಬದಲಾವಣೆಯಾಗಿದೆ. ಈ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹತ್ತು-ಹಲವಾರು ಪರಿಣಾಮಗಳು ಎದುರಾಗುವ ಸಾಧ್ಯತೆ ಇದೀಗ ಕಂಡು ಬರುತ್ತಿದೆ. ನೆಲಕಚ್ಚಿದಂತಿದ್ದ ಕಾಂಗ್ರೆಸ್ ಪಾಳಯದಲ್ಲಿ ಒಂದಷ್ಟು ಚೈತನ್ಯ ಮೂಡಿದಂತಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಜಿ.ಪಂ. ಹಾಗೂ ತಾ.ಪಂ.ಗಳ ಅಧಿಕಾರಾವಧಿ ಮುಕ್ತಾಯಗೊಂಡು ಸುಮಾರು ೨ ವರ್ಷಗಳೇ ಕಳೆದಿವೆ. ಚುನಾವಣಾ ದೃಷ್ಟಿಕೋನದಿಂದ ಹಾಗೂ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಸೇರಿದಂತೆ ಇನ್ನಿತರ ಕೆಲವು ಕಾರಣಗಳಿಂದ ಈತನಕ ಜಿ.ಪಂ., ತಾ.ಪಂ. ಚುನಾವಣೆಯ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಂಡAತಿರಲಿಲ್ಲ. ಪ್ರಸ್ತುತ ಹೊಸ ಸರಕಾರ ರಚನೆಯಾಗಿದ್ದು, ಜಿ.ಪಂ., ತಾ.ಪಂ. ಚುನಾಚಣೆಗಳ ಕಸರತ್ತು ಆರಂಭವಾಗಲಿದೆ. ಇದರೊಂದಿಗೆ ಮುಂದಿನ ವರ್ಷ ಲೋಕಸಭಾ ಚುನಾವಣೆಯೂ ಎದುರುಗೊಳ್ಳಲಿದೆ. ಇದೀಗ ಕೊಡವ ಅಕಾಡೆಮಿ, ಅರೆಭಾಷಾ ಅಕಾಡೆಮಿಗಳಿಗೂ ಆಡಳಿತ ಮಂಡಳಿ ಹೊಸದಾಗಿ ರಚನೆಗೊಳ್ಳಬೇಕಿದೆ. ಆರ್.ಎಂ.ಸಿ. ಚುನಾವಣೆಯೂ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲೂ ಕೊಡಗಿನಲ್ಲಿ ರಾಜಕೀಯದ ಸಂಚಲನಗಳು ಒಂದೊAದಾಗಿ ಸೃಷ್ಟಿಯಾಗಲು ಇದೀಗ ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶವೂ ಪ್ರಾಮುಖ್ಯತೆ ಪಡೆಯಲಿರುವುದು ಬಹುತೇಕ ಖಚಿತವಾಗಿದೆ.