ವೀರಾಜಪೇಟೆ, ಸೆ. ೧೫ : ಐತಿಹಾಸಿಕ ಹಿನ್ನೆಲೆ ಇರುವ ವೀರಾಜಪೇಟೆಯ ಗೌರಿಗಣೇಶ ಉತ್ಸವದ ಪೂರ್ವಭಾವಿ ಸಭೆ ವೀರಾಜಪೇಟೆ ಪಟ್ಟಣದ ಪುರಭವನದಲ್ಲಿ ಜನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಭರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪಟ್ಟಣದ ೨೨ ಸಮಿತಿ ಸದಸ್ಯರುಗಳು ಭಾಗವಹಿಸಿ ತಾ. ೧೯ ರಂದು ಗಣೇಶ ಪ್ರತಿಷ್ಠಾಪಿಸಿ ೯ ದಿನಗಳ ಕಾಲ ಯಾವ ರೀತಿಯಲ್ಲಿ ಆಚರಣೆ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು.
ವೃತ್ತ ನಿರೀಕ್ಷಕ ಶಿವರುದ್ರ ಮಾತನಾಡಿ, ಸರ್ವೋಚ್ಚ ಹಾಗೂ ರಾಜ್ಯ ಉಚ್ಚ ನ್ಯಾಯಾಲಯ ಮತ್ತು ಸರ್ಕಾರದ ಆದೇಶದಂತೆ ರಾತ್ರಿ ೧೦ ಗಂಟೆಯ ನಂತರ ಧ್ವನಿವರ್ಧಕ ಬಳಸುವಂತಿಲ್ಲ. ಸಮಿತಿಗಳು ನಡೆಸುವ ಯಾವುದೇ ಕಾರ್ಯಕ್ರಮಗಳು ೧೦ ಗಂಟೆಯ ಒಳಗೆ ಸೀಮಿತವಾಗಿರಬೇಕು. ನಿಗದಿತ ಡೆಸಿಬಲ್ನಷ್ಟೆ ಶಬ್ದ ಬಳಸಿ ಸೌಹಾರ್ದತೆಯಿಂದ ಉತ್ಸವ ನಡೆಸಿ ಶಾಂತಿ ಸುವ್ಯವಸ್ಥೆಗೆ ಸಹಕರಿಸುವಂತೆ ಕೋರಿದರು.
ಪುರಸಭೆ ಸದಸ್ಯ ಸಿ.ಕೆ. ಪೃಥ್ವಿನಾಥ್ ಮಾತನಾಡಿ, ವೀರಾಜಪೇಟೆಯಲ್ಲಿ ಗೌರಿಗಣೇಶೋತ್ಸವವನ್ನು ಶತಮಾನಗಳಿಂದ ಶಾಂತಿಯುತವಾಗಿ ಸೌಹಾರ್ದತೆಯಿಂದ ಆಚರಿಸ ಲಾಗುತ್ತಿದೆ. ಜನರ ಆಚಾರ ವಿಚಾರಗಳಿಗೆ ಇಂತಹ ಕಟ್ಟುನಿಟ್ಟಿನ ಕಾನೂನುಗಳನ್ನು ಹೇರಿದರೆ ಹಬ್ಬವನ್ನು ಆಚರಿಸುವುದಾರೂ ಹೇಗೆ ಎಂದು ಪ್ರಶ್ನಿಸಿದರಲ್ಲದೆ, ಆಚರಣೆಗೆ ಮುಕ್ತ ಅವಕಾಶ ಇರಲಿ ಎಂದು ಕೋರಿದರಲ್ಲದೆ, ಸಮಿತಿಗಳು ರೂ. ೫ ಲಕ್ಷದ ಬಾಂಡ್ ನೀಡಬೇಕು ಎಂಬ ಹೊಸ ನಿಯಮದಿಂದ ಸಮಿತಿಗಳಿಗೆ ಹೊರೆಯಾಗದಂತೆ ಶಾಸಕರು ಹಾಗೂ ಜನೋತ್ಸವ ಸಮಿತಿ ಅಧ್ಯಕ್ಷರು ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಮಾತನಾಡಿ, ಪುರಸಭೆ ಸ್ವಚ್ಛತೆಗಾಗಿ ೯ ದಿನಗಳ ಕಾಲ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. ಶೋಭಾಯಾತ್ರೆ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಪಟ್ಟಣದ ಹೊರಭಾಗದಲ್ಲಿ ವಾಹನ ನಿಲುಗಡೆ ಸಮಂಜಸವಾಗಿದೆ. ಆದರೆ ಅಗತ್ಯ ಸಂದರ್ಭ ಕೆಲವು ವಾಹನಗಳಿಗೆ ವಿನಾಯಿತಿ ನೀಡಬೇಕು. ಮುಂದಿನ ವರ್ಷದಿಂದ ಒಂದೇ ವೇದಿಕೆಯಲ್ಲಿ ಸಮಿತಿಗಳು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ಎಲ್ಲಾ ಸಮಿತಿಯವರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವಂತೆ ಕೋರಿದರು.
ಲೋಕೋಪಯೋಗಿ ಸಹಾಯಕ ಅಭಿಯಂತರ ಹಾಗೂ ಪುರಸಭೆಯ ಪ್ರಬಾರ ಅಭಿಯಂತರ ರಾಮಣ್ಣ ಗೌಡ ಮಾತನಾಡಿ. ಪಟ್ಟಣದಲ್ಲಿ ಲೋಕೋಪಯೊಗಿ ಮತ್ತು ಪುರಸಭೆಯಿಂದ ರಸ್ತೆಗಳ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ಪಾದಚಾರಿ ಮಾರ್ಗ ದುರಸ್ತಿ ಸೇರಿದಂತೆ ಆಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಜನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಬರೀಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲಾ ಸಮಿತಿಗಳಿಗೆ ಬೇಕಾದ ಪರವಾನಿಗೆ ಇತ್ಯಾದಿಗಳನ್ನು ಜನೋತ್ಸವ ಸಮಿತಿಯ ಮೂಲಕ ಪಡೆದುಕೊಳ್ಳಬಹುದು. ವೀರಾಜಪೇಟೆಯಲ್ಲಿ ಹಿಂದಿನಿAದಲೂ ವಿಜೃಂಭಣೆಯಿAದ ಆಚರಿಸಿಕೊಂಡು ಬರುತ್ತಿರುವ ಗೌರಿಗಣೇಶೋತ್ಸವವನ್ನು ಎಲ್ಲ್ಲರ ಸಹಕಾರದಿಂದ ಯಾವುದೇ ಅಡೆತಡೆ ಇಲ್ಲದೆ ಅದ್ದೂರಿಯಾಗಿ ಆಚರಿಸುವಂತಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಪುರಸಭೆ ಮುಖ್ಯಾಧಿಕಾರಿ ಹಾಗೂ ಜನೋತ್ಸವ ಸಮಿತಿ ಕಾರ್ಯದರ್ಶಿ ಚಂದ್ರಕುಮಾರ್ ಪುರಸಭಾ ಸದಸ್ಯೆ ದೇಚಮ್ಮ, ಬಸವೇಶ್ವರ ದೇವಾಲಯ ಗೌರಿ ಗಣೇಶೋತ್ಸವ ಸಮಿತಿಯ ಪುಷ್ಪರಾಜ್, ಮೂರ್ನಾಡು ರಸ್ತೆ ಕಾವೇರಿ ಗಣೇಶೋತ್ಸವ ಸಮಿತಿಯ ನಂಬುಡಮಾಡ ರಾಜಪ್ಪ, ಪಾಡಂಡ ರಚನ್ ಮೇದಪ್ಪ ಮತ್ತಿತರರು ಮಾತನಾಡಿದರು.
ವೇದಿಕೆಯಲ್ಲಿ ಪುರಸಭೆಯ ಸದಸ್ಯರಾದ ರಂಜಿ ಪೂಣಚ್ಚ, ಮಹಾದೇವ, ಮತೀನ್ ರಜನಿಕಾಂತ್, ಮಹಾದೇವ, ಮತೀನ್, ವಿನಾಂಕ್ ಕುಟ್ಟಪ್ಪ, ಜೂನಾ ಸುನೀತ ಮತ್ತಿತರರು ಉಪಸ್ಥಿತರಿದ್ದರು.