ಮಡಿಕೇರಿ, ಸೆ. ೧೫: ಸರ್ಕಾರಿ ನೌಕರರು ನಿಯಮಾನುಸಾರ ಕಾಲ ಮಿತಿಯೊಳಗೆ ಕರ್ತವ್ಯ ನಿರ್ವಹಿಸಿದ್ದಲ್ಲಿ ಜಿಲ್ಲಾಡಳಿತಕ್ಕೆ ಒಳ್ಳೆಯ ಹೆಸರು ಬರಲಿದೆ. ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರನ್ನು ಸತಾಯಿಸದೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ಎಂ.ಎಸ್. ಪವನ್ ಕುಮಾರ್ ಹೇಳಿದರು.
ನಗರದ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಆಗಮಿಸಿದಾಗ ಸೌಜನ್ಯದಿಂದ ನಡೆದುಕೊಳ್ಳಬೇಕು. ಸಾರ್ವಜನಿಕರನ್ನು ಕೂರಿಸಿ ಮಾತನಾಡಿಸಬೇಕು. ತಮ್ಮ ಹಂತದಲ್ಲಿ ಕೆಲಸ ಆದಲ್ಲಿ ಕಾಲಮಿತಿಯಲ್ಲಿ ಮಾಡಿಕೊಡಬೇಕು. ಕೆಲಸ ಆಗದಿದ್ದಲ್ಲಿ ಹಿಂಬರಹವನ್ನಾದರೂ ನೀಡಬೇಕು.
ಸರ್ಕಾರಿ ಕಚೇರಿಗಳಲ್ಲಿ ಮಾಜಿ ಸೈನಿಕರು ಹಾಗೂ ವೃದ್ಧರಿಗೆ ಪ್ರಥಮ ಆದ್ಯತೆ ನೀಡಿ ಕೆಲಸ ಮಾಡಬೇಕು. ಮಹಿಳೆಯರು ಹಾಗೂ ಇತರರು ಹಲವು ದಾಖಲಾತಿ, ಪ್ರಮಾಣ ಪತ್ರಗಳಿಗೆ ಕಚೇರಿಗೆ ಆಗಮಿಸಿದಾಗ ನಿಯಮಾನುಸಾರ ಕೆಲಸ ಮಾಡಿಕೊಡಬೇಕು ಎಂದರು.
ಪ್ರತೀ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಗುರುತಿನ ಚೀಟಿಯನ್ನು ಹೊಂದಿರಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಸಮವಸ್ತçವನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಪವನ್ ಕುಮಾರ್ ನಿರ್ದೇಶನ ನೀಡಿದರು.
ಶುಕ್ರವಾರ ನಡೆದ ದೂರು ಅರ್ಜಿ ಸ್ವೀಕಾರ ಸಂದರ್ಭದಲ್ಲಿ ೮ ದೂರು ಅರ್ಜಿಗಳು ದಾಖಲಾಗಿದ್ದು,ಕಂದಾಯ ಹಾಗೂ ಭೂ ದಾಖಲೆಗಳ ಇಲಾಖೆಗೆ ಒಳಪಟ್ಟಿವೆ ಎಂದು ಪವನ್ ಕುಮಾರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಪ್ರತೀ ತಿಂಗಳ ಎರಡನೇ ಬುಧವಾರ (ಸೋಮವಾರಪೇಟೆ, ಕುಶಾಲನಗರ, ವೀರಾಜಪೇಟೆ ಅಥವಾ ಪೊನ್ನಂಪೇಟೆ) ಇಲ್ಲಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಲಾಗುತ್ತದೆ. ಜೊತೆಗೆ ಪ್ರತೀ ತಿಂಗಳ ಎರಡನೇ ಶುಕ್ರವಾರ ಮಡಿಕೇರಿಯ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ದೂರು (ಸರ್ಕಾರಿ ರಜೆ ದಿನ ಹೊರತುಪಡಿಸಿ) ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಪವನ್ ಕುಮಾರ್ ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗೆ ೦೮೨೭೨-೨೯೫೨೯೭ ಹಾಗೂ ಲೋಕಾಯುಕ್ತ ಡಿವೈಎಸ್ಪಿ ಅವರ ಮೊಬೈಲ್ ಸಂಖ್ಯೆ ೯೩೬೪೦೬೨೫೭೮ನ್ನು ಸಂಪರ್ಕಿಸ ಬಹುದು ಎಂದು ಹೇಳಿದರು.