ವೀರಾಜಪೇಟೆ, ಸೆ. ೧೫: ಸಾಹಿತ್ಯ ರಚನೆಯಿಂದ ಚಿಂತನೆಗೆ ಪ್ರೇರಣೆ ಸಾಧ್ಯ ಎಂದು ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಶೋಕ್ ಸಂಗಪ್ಪ ಆಲೂರು ಹೇಳಿದರು.
ವೀರಾಜಪೇಟೆ ಸೈಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಅರ್ಜುನ್ ಮೌರ್ಯ ರಚಿಸಿದ “ದುಡಿ” ಕನ್ನಡ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
“ಸಾಮಾಜಿಕ ಚಿಂತನೆಗೆ ಭಾಷೆಯ ಬೆಳವಣಿಗೆಗೆ ಅತಿ ಅಗತ್ಯ. ಜನಾಭಿಪ್ರಾಯವನ್ನು ಸಾಹಿತ್ಯದ ಪರವಾಗಿಸುವುದು ಭಾಷೆಯ ಕೆಲಸ. ಸಾಹಿತ್ಯಗಳು ಮನುಷ್ಯನನ್ನು ಗಡಿಯಿಂದ ಆಚೆ ಚಿಂತಿಸಲು ಪ್ರೇರೇಪಿಸುತ್ತದೆ” ಎಂದರು. ವಿಮರ್ಶಕ ಮತ್ತು ಅಕ್ಕ ಐ.ಎ.ಎಸ್. ಅಕಾಡೆಮಿಯ ನಿರ್ದೇಶಕ ಡಾ. ಶಿವಕುಮಾರ್ ಅವರು ಪುಸ್ತಕ ವಿಮರ್ಶನೆ ನಡೆಸಿದರು.
“ಸಾಹಿತ್ಯ ಕ್ಷೇತ್ರದಲ್ಲಿ ಪ್ರಗತಿಪರ ಚಿಂತನೆ ಬಲು ಮುಖ್ಯ. ಈ ನಿಟ್ಟಿನಲ್ಲಿ ಅರ್ಜುನ್ ಮೌರ್ಯ ಅವರ ಪ್ರಯತ್ನ ಶ್ಲಾಘನೀಯ” ಎಂದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಐಸಾಕ್ ರತ್ನಾಕರ್, ವೀರಾಜಪೇಟೆ ತಾಲೂಕು ದಂಡಾಧಿಕಾರಿ ರಾಮಚಂದ್ರ, ಕೊಡಗು ವಿಶ್ವವಿದ್ಯಾಲಯ ಕುಲಸಚಿವ ಡಾ. ಶೀನಪ್ಪ, ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ವೇದಿಕೆಯಲ್ಲಿದ್ದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು.