ಸೋಮವಾರಪೇಟೆ, ಸೆ. ೧೫: ಮಹಿಳೆಯರು ತಮ್ಮ ಆರೋಗ್ಯದತ್ತ ಹೆಚ್ಚು ಗಮನ ಹರಿಸಬೇಕೆಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ನೇತೃತ್ವದಲ್ಲಿ, ಶಾಂತಳ್ಳಿ ವಲಯ, ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ನಮ್ಮೂರು ನಮ್ಮ ಕೆರೆ ಯೋಜನೆಯ ೫೩೨ನೇ ದೊಡ್ಡತೋಳೂರು ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದ ಹಿನ್ನೆಲೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಈ ನಿಟ್ಟಿನಲ್ಲಿ ಮಹಿಳೆಯು ಕುಟುಂಬದ ಆರೋಗ್ಯದೊಂದಿಗೆ ತಮ್ಮ ಆರೋಗ್ಯದತ್ತಲೂ ಹೆಚ್ಚಿನ ಗಮನ ಹರಿಸಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಸಬಲೀಕರಣದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿವೆ. ಯೋಜನೆಯ ಪ್ರಯೋಜನ ಪಡೆದುಕೊಳ್ಳು ವುದರೊಂದಿಗೆ ಆರ್ಥಿಕವಾಗಿ ಮುನ್ನೆಲೆಗೆ ಬರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೆರೆಯ ಹಸ್ತಾಂತರದ ನಾಮಫಲಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಅನಾವರಣ ಮಾಡಿದರು. ಯೋಜನಾಧಿಕಾರಿ ರೋಹಿತ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಭಿಮನ್ಯು ಕುಮಾರ್, ಜಿ.ಪಂ. ಮಾಜೀ ಸದಸ್ಯ ಬಿ.ಜೆ. ದೀಪಕ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎ. ಧರ್ಮಪ್ಪ, ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್, ಗ್ರಾ.ಪಂ. ಅಧ್ಯಕ್ಷೆ ಭವಾನಿ ಮಂಜುನಾಥ್, ಉಪಾಧ್ಯಕ್ಷೆ ಆರತಿ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಕೆ. ವಿರೂಪಾಕ್ಷ, ಗ್ರಾ.ಪಂ. ಸದಸ್ಯರುಗಳಾದ ನವೀನ್, ಮೋಹಿತ್, ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಆದರ್ಶ್, ದೊಡ್ಡತೋಳೂರು ಕೆರೆ ಸಮಿತಿ ಅಧ್ಯಕ್ಷ ಎ.ಜೆ. ಕೃಷ್ಣಪ್ಪ, ಒಕ್ಕೂಟದ ಅಧ್ಯಕ್ಷೆ ಟಿ.ಕೆ. ಸರಿತಾ ಪಿಡಿಓ ರವಿ, ಯೋಜನೆಯ ಮೇಲ್ವಿಚಾರಕರಾದ ಲಕ್ಷ್ಮಣ್, ರಾಜಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತೋಳೂರು ಶೆಟ್ಟಳ್ಳಿಯಲ್ಲಿರುವ ಚೌಡ್ಲು ವಿಎಸ್‌ಎಸ್‌ಎನ್ ಸಭಾಂಗ ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾತಿ ಯಾದ ಸುಜ್ಞಾನ ನಿಧಿ, ಸಹಾಯಧನ, ಕೃಷಿ ಅನುದಾನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.
ಇದಕ್ಕೂ ಮುನ್ನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ, ಗ್ರಾ.ಪಂ. ಸಹಭಾಗಿತ್ವದಲ್ಲಿ ಹೂಳೆತ್ತಲಾದ ದೊಡ್ಡತೋಳೂರು ಕೆರೆಗೆ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಬಾಗಿನ ಅರ್ಪಿಸಿದರು.